ಬೆಂಗಳೂರು , ಮಾರ್ಚ್ 15: ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ತಂಗಿದ್ದ ಒಡಿಶಾ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ನೀಡಲು ಯತ್ನಿಸಿದ ಆರೋಪದ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಕುದುರೆ ವ್ಯಾಪಾರ ತಪ್ಪಿಸಲು ಒಡಿಶಾ ಕಾಂಗ್ರೆಸ್ನ ಕೆಲವು ಶಾಸಕರು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಇದೇ ವೇಳೆ ಒಡಿಶಾದಿಂದ ಬಂದ ನಾಲ್ವರು ವ್ಯಕ್ತಿಗಳು ರೆಸಾರ್ಟ್ಗೆ ಭೇಟಿ ನೀಡಿ ಶಾಸಕರನ್ನು ಸಂಪರ್ಕಿಸಲು ಯತ್ನಿಸಿದರೆಂದು ತಿಳಿದುಬಂದಿದೆ. ಕಾಂಗ್ರೆಸ್ ನಾಯಕರು ನೀಡಿದ ಮಾಹಿತಿಯಂತೆ, ಆರೋಪಿಗಳು ಕೆಲ ಶಾಸಕರಿಗೆ ಸುಮಾರು ಕೋಟಿ ಹಣದ ಆಫರ್ ನೀಡಿರುವುದಾಗಿ ಆರೋಪಿಸಲಾಗಿದೆ. ಅವರ ಬಳಿ ಖಾಲಿ ಚೆಕ್ ಕೂಡ ಇದ್ದದ್ದು ಪತ್ತೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಅವರನ್ನು ಪ್ರಶ್ನಿಸಿದಾಗ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಇನ್ನಿಬ್ಬರು ಸಿಕ್ಕಿಬಿದ್ದಿದ್ದಾರೆ.
ಪೊಲೀಸರು ವಶಕ್ಕೆ ಪಡೆದಿರುವವರನ್ನು ಬಿರೇಂದ್ರ ಪ್ರಸಾದ್ ಮತ್ತು ಅಜಿತ್ ಕುಮಾರ್ ಸಾಹು ಎಂದು ಗುರುತಿಸಲಾಗಿದೆ. ಮಾಹಿತಿ ದೊರೆತ ತಕ್ಷಣ ಬಿಡದಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಆರೋಪಿಗಳ ಹಿನ್ನೆಲೆ, ರೆಸಾರ್ಟ್ಗೆ ಬಂದ ಉದ್ದೇಶ ಹಾಗೂ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಸುಳಿವುಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆ ಕುರಿತು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ಗೆ ಪ್ರೇರೇಪಿಸಲು ಲಂಚದ ಆಮಿಷ ನೀಡಲು ಯತ್ನಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪಕ್ಷದ ಅಧಿಕೃತ ಸಂಪರ್ಕ ಇನ್ನೂ ದೃಢಪಟ್ಟಿಲ್ಲ ಎಂದು ತಿಳಿದುಬಂದಿದೆ. ಇದಕ್ಕೂ ನಡುವೆ, ‘ಆಪರೇಷನ್ ಕಮಲ’ ಆತಂಕದ ಹಿನ್ನೆಲೆಯಲ್ಲಿ ರೆಸಾರ್ಟ್ನಲ್ಲಿ ತಂಗಿದ್ದ ಒಡಿಶಾ ಕಾಂಗ್ರೆಸ್ನ ಎಂಟು ಶಾಸಕರನ್ನು ಭದ್ರತಾ ಕಾರಣಗಳಿಂದ ಬೆಂಗಳೂರಿನ ಸದಾಶಿವನಗರದಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕರ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ. ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಅವರನ್ನು ಬಸ್ ಮೂಲಕ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಈ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.