ಚೆನ್ನೈ ಮೇ 30: ತಮಿಳು ಚಿತ್ರರಂಗದ ಹಿರಿಯ ನಟ ಅಜಿತ್ ಕುಮಾರ್ (Ajith Kumar) ಅವರ ತಾಯಿ ಮೋಹಿನಿ ಮಣಿ (85) ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದುಬೈನಲ್ಲಿದ್ದ ನಟ ಅಜಿತ್ ಕುಮಾರ್ ಅವರು ತರಾತುರಿಯಲ್ಲಿ ಚೆನ್ನೈಗೆ ಹಿಂತಿರುಗುತ್ತಿದ್ದಾರೆ ಎಂದು ವರದಿಯಾಗಿದೆ.

ಕಾರ್ ರೇಸಿಂಗ್ ಹಿನ್ನೆಲೆಯಲ್ಲಿ ಅಜಿತ್ ಕುಮಾರ್ ಅವರು ದುಬೈನಲ್ಲಿದ್ದರು. ತಾಯಿ ತೀವ್ರ ಅನಾರೋಗ್ಯಕ್ಕೊಳಗಾಗಿ ಕೊನೆಯುಸಿರೆಳೆದ ಸುದ್ದಿ ತಿಳಿಯುವಷ್ಟರಲ್ಲಿ ತಾಯಿಯ ಜೊತೆ ಕೊನೆಯದಾಗಿ ಮಾತನಾಡಲು ಕೂಡ ಅಜಿತ್ ಅವರಿಗೆ ಸಾಧ್ಯವಾಗದಿರುವುದು ತೀವ್ರ ಆಘಾತವನ್ನುಂಟು ಮಾಡಿದೆ. ಚೆನ್ನೈನ ಪಾಲವಾಕ್ಕಂನಲ್ಲಿರುವ ಅಜಿತ್ ಅವರ ನಿವಾಸದಲ್ಲಿ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಮೂರು ವರ್ಷಗಳ ಹಿಂದಷ್ಟೇ (ಮಾರ್ಚ್ 24, 2023 ರಂದು) ಅಜಿತ್ ಅವರ ತಂದೆ ಪಿ. ಸುಬ್ರಮಣ್ಯಂ ನಿಧನರಾಗಿದ್ದರು.
ಅಜಿತ್ ಅವರ ತಾಯಿಯ ನಿಧನಕ್ಕೆ ಚಿತ್ರರಂಗದ ಸ್ಟಾರ್ ನಟರು, ತಂತ್ರಜ್ಞರು ಹಾಗೂ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಹಿರಿಯ ನಟ ಕಮಲ್ ಹಾಸನ್ ಅವರು ಟ್ವೀಟ್ ಮಾಡಿ, “ನಟ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರ ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ಅಜಿತ್ ಹಾಗೂ ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು” ಎಂದು ಸಂತಾಪ ಸೂಚಿಸಿದ್ದಾರೆ. ತಮಿಳುನಾಡಿನ ಪ್ರಮುಖ ರಾಜಕೀಯ ನಾಯಕರಾದ ಎಂ.ಕೆ. ಸ್ಟಾಲಿನ್, ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸೇರಿದಂತೆ ಅನೇಕರು ಅಜಿತ್ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಅಜಿತ್ ಅವರು ಕಳೆದ ವರ್ಷ ತೆರೆಕಂಡ ‘ವಿದುಮುಯಾರ್ಚಿ’ ಹಾಗೂ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ಚಿತ್ರರಂಗದಿಂದ ಸಣ್ಣ ಬ್ರೇಕ್ ಪಡೆದು, ತಮಗಿಷ್ಟವಾದ ಕಾರ್ ರೇಸಿಂಗ್ ಕ್ಷೇತ್ರದತ್ತ ಗಮನಹರಿಸಿದ್ದು, ಸ್ವಂತ ರೇಸಿಂಗ್ ತಂಡವನ್ನು ಆರಂಭಿಸಿ ಅದರಲ್ಲೇ ಬ್ಯುಸಿಯಾಗಿದ್ದರು.