ಉಸಿರಾಡುವ ಗಾಳಿಯಲ್ಲಿ ಹೆಚ್ಚಾಗುತ್ತಿರುವ ಸೀಸ ಪ್ರಮಾಣ ಅಪಾಯಕಾರಿ ಸ್ಥಿತಿಯಲ್ಲಿ ಮಂಗಳೂರು

ಮಂಗಳೂರು ಡಿಸೆಂಬರ್ 26: ಒಂದು ಕಡೆ ಅರಬ್ಬೀ ಸಮುದ್ರ ಮತ್ತೊಂದೆಡೆ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಸುಮದರ ನಗರ ಮಂಗಳೂರಿನಲ್ಲೂ ಶುದ್ದ ಗಾಳಿಯ ಕೊರತೆ ಎದುರಾಗಿದೆ. ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ನಂತರ ಮಂಗಳೂರಿನ ಜನತೆಯೂ ಗಂಡಾಂತರ ಎದುರಿಸುವಂತಾಗಿದೆ.

ಆ್ಯಂಟಿ ಪೊಲ್ಯೂಷನ್‌ ಡ್ರೈವ್‌ ಎಪಿಡಿ ಫೌಂಡೇಷನ್‌ ನಡೆಸಿರುವ ಅಧ್ಯಯನ ವರದಿಯಲ್ಲಿ ಈ ಅಂಶಗಳು ಬಹಿರಂಗವಾಗಿವೆ. ಅದರಲ್ಲೂ ಹೆಚ್ಚಾಗಿ ನಗರದ ಗಾಳಿಯಲ್ಲಿ ಸೀಸದ ಪ್ರಮಾಣ ಪತ್ತೆಯಾಗಿದ್ದು, ಅಪಾಯದ ಗಂಟೆಯನ್ನು ಬಾರಿಸಿದೆ.

ಗಾಳಿಯಲ್ಲಿ ಸೀಸದ ಅಂಶಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿರುವುದು ‘ಶುದ್ಧ ಗಾಳಿ’ ಯೋಜನೆಯನ್ವಯ ಸೇಂಟ್ ಜಾರ್ಜ್‍ಸ್ ಹೋಮಿಯೋಪತಿ ಜತೆಗೂಡಿ ಎಪಿಡಿ ಫೌಂಡೇಷನ್ ನಡೆಸಿದ ವಿಸ್ತೃತ ಅಧ್ಯಯನದಿಂದ ಬಹಿರಂಗವಾಗಿದೆ.

ನಗರದ ಪಿವಿಎಸ್ ಜಂಕ್ಷನ್, ಬಂಟ್ಸ್ ಹಾಸ್ಟೆಲ್, ಬಂದರು, ಮಹಾನಗರ ಪಾಲಿಕೆ, ಪಂಪ್‌ವೆಲ್ ಮತ್ತು ಬೈಕಂಪಾಡಿ ಪ್ರದೇಶಗಳಲ್ಲಿ ಪಿಎಂ 2.5 ಅಂಶ ಮಿತಿಗಿಂತ ಹೆಚ್ಚಾಗಿದೆ. ನಗರದಲ್ಲಿ ಬೃಹತ್‌ ಪ್ರಮಾಣದ ಕೈಗಾರಿಕೆಗಳಿದ್ದರೂ, ಅತಿ ಹೆಚ್ಚಿನ ವಾಯು ಮಾಲಿನ್ಯ ಉಂಟಾಗುತ್ತಿರುವುದು ವಾಹನಗಳಿಂದ ಎಂಬುದು ಸಮೀಕ್ಷೆಗಳಿಂದ ಧೃಡಪಟ್ಟಿದೆ.

ಅದರಲ್ಲೂ ಹೊಗೆ ಉಗುಳುವ ಶೇ 10 ರಷ್ಟು ವಾಹನಗಳು ಮಾಲಿನ್ಯಕ್ಕೆ ಅಪಾಯಕಾರಿ ಕೊಡುಗೆ ನೀಡುತ್ತಿವೆ ಎಂಬುದು ಎಪಿಡಿ ಅಧ್ಯಯನದಲ್ಲಿ ಬಹಿರಂಗವಾಗಿದೆ.‘ನಗರದ ಹೆಚ್ಚಿನ ಕಡೆಗಳಲ್ಲಿ ಒಟ್ಟಾರೆ ವಾಯು ಗುಣಮಟ್ಟ ಉತ್ತಮವಾಗಿದೆ ಎಂದು ಅಧ್ಯಯನದಲ್ಲಿ ಕಂಡು ಬಂದರೂ, ದೀರ್ಘಾವಧಿಯಲ್ಲಿ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿದೆ.

ವಾಯು ಮಾಲಿನ್ಯವನ್ನು ಸಂಪೂರ್ಣ ನಿಯಂತ್ರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಎಪಿಡಿ ಫೌಂಡೇಷನ್ ಎಚ್ಚರಿಕೆಯೊಂದಿಗೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಎಪಿಡಿಯು ‘ಶುದ್ಧಗಾಳಿ’ ಯೋಜನೆಯ ಮೂಲಕ ನಗರ ಪ್ರದೇಶದಲ್ಲಿ ತಪಾಸಣೆ ಮಾಡುತ್ತಿದೆ. ಮೊದಲ ಬಾರಿಗೆ ನಡೆಸಿದ ಅಧ್ಯಯನದ ಭಾಗವಾಗಿ ನಗರದಲ್ಲಿ ಆರು ವಾಯು ಮಾಲಿನ್ಯಕಾರಕಗಳನ್ನು ಪರಿಶೀಲಿಸಲಾಗಿತ್ತು.

3 Shares

Facebook Comments

comments