ಸೌದಿ ಅರೇಬಿಯಾ,ಮಾರ್ಚ್ 24: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ತಾಂತ್ರಿಕ ದೋಷದ ಕಾರಣದಿಂದಾಗಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.

ಸೋಮವಾರ ಮುಂಜಾನೆ ಬೆಂಗಳೂರಿನಿಂದ ಲಂಡನ್ ಹೀಥ್ರೂ ವಿಮಾನ ನಿಲ್ದಾಣಕ್ಕೆ ಹೊರಟಿದ್ದ AI 133 ವಿಮಾನವು ಸುಮಾರು ಆರು ಗಂಟೆಗಳ ಕಾಲ ಹಾರಾಟ ನಡೆಸಿದ ನಂತರ ತಾಂತ್ರಿಕ ಸಮಸ್ಯೆ ಎದುರಿಸಿತು. ಸುರಕ್ಷತೆಯ ದೃಷ್ಟಿಯಿಂದ ವಿಮಾನದ ಪಥವನ್ನು ಬದಲಿಸಿದ ಪೈಲಟ್ಗಳು, ಹತ್ತಿರದ ಜೆಡ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಲು ಅನುಮತಿ ಕೋರಿದರು. ಭಾರತೀಯ ಕಾಲಮಾನ ರಾತ್ರಿ ಸುಮಾರು 7:58ಕ್ಕೆ ವಿಮಾನವು ಜೆಡ್ಡಾದಲ್ಲಿ ಸುರಕ್ಷಿತವಾಗಿ ಇಳಿಯಿತು.
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ವರ್ಗದವರು ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. “ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಜೆಡ್ಡಾದತ್ತ ತಿರುಗಿಸಲಾಗಿದ್ದು, ಸದ್ಯ ವಿಮಾನವು ತಾಂತ್ರಿಕ ತಪಾಸಣೆಗೆ ಒಳಪಟ್ಟಿದೆ,” ಎಂದು ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ. ಪ್ರಯಾಣಿಕರಿಗೆ ಜೆಡ್ಡಾ ನಿಲ್ದಾಣದಲ್ಲಿ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದ್ದು, ಅವರ ಮುಂದಿನ ಪ್ರಯಾಣಕ್ಕಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.