ಮಂಗಳೂರು ಮಾರ್ಚ್ 14: ಮಂಗಳೂರು ಮತ್ತು ಶಾರ್ಜಾ ನಡುವೆ ಮಾರ್ಚ್ 16ರಿಂದ 28ರವರೆಗೆ ಪ್ರತಿದಿನ ವಿಮಾನ ಸಂಚಾರವಿರುತ್ತದೆ. ಮಧ್ಯ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ವಿಮಾನಯಾನ ಆರಂಭಿಸಲಾಗಿದೆ. ಏರ್ ಇಂಡಿಯಾ 6057 ಮಂಗಳೂರಿನಿಂದ ಮಧ್ಯಾಹ್ನ 1.25ಕ್ಕೆ ಹೊರಟು ಶಾರ್ಜಾವನ್ನು ಅಲ್ಲಿನ ಸ್ಥಳೀಯ ಸಮಯ ಸಂಜೆ 4.05 ಕ್ಕೆ ತಲುಪಲಿದೆ. ಏರ್ ಇಂಡಿಯಾ 6058 ಶಾರ್ಜಾದಿಂದ ಅಲ್ಲಿನ ಸ್ಥಳೀಯ ಸಮಯ ಸಂಜೆ 5.05 ಕ್ಕೆ ಹೊರಟು ಮಂಗಳೂರನ್ನು ರಾತ್ರಿ 10.30 ಕ್ಕೆ ತಲುಪಲಿದೆ.

ಈಗಾಗಲೇ ಸಾಮಾನ್ಯ ದಿನಗಳಲ್ಲಿ ಮಂಗಳೂರಿನಿಂದ ದುಬೈಗೆ ವಾರದಲ್ಲಿ17, ಅಬುಧಾಬಿಗೆ 14, ದೋಹಾಕ್ಕೆ 3, ಜೆದ್ದಾಕ್ಕೆ 3, ಮಸ್ಕತ್ ಗೆ 2, ಬಹರೇನ್ ಗೆ 4, ಕುವೈತ್ಗೆ 3, ದಮ್ಮಾಮಗೆ 6 ವಿಮಾನಗಳು ಸಂಚರಿಸುತ್ತವೆ. ಆದರೆ ಮಧ್ಯ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಬಹುತೇಕ ಎಲ್ಲ ವಿಮಾನಗಳ ಸಂಚಾರ ರದ್ದಾಗಿದೆ.
ಮಂಗಳೂರು ಮತ್ತು ರಾಷ್ಟ್ರರಾಜಧಾನಿ ಹೊಸದಿಲ್ಲಿ ನಡುವೆ ಮಾರ್ಚ್ 16ರಿಂದ 25ರವರೆಗೆ ಸೋಮವಾರ, ಬುಧವಾರ ಮತ್ತು ಭಾನುವಾರ ವಿಮಾನ ಸಂಚರಿಸಲಿದೆ. ಐಎಕ್ಸ್ 1992 ಮಂಗಳೂರಿನಿಂದ ಬೆಳಗ್ಗೆ 9.30 ಕ್ಕೆ ಹೊರಟು ಮಧ್ಯಾಹ್ನ 12.25 ಕ್ಕೆ ಹೊಸದಿಲ್ಲಿ ತಲುಪಲಿದೆ. ಐಎಕ್ಸ್ 1991 ಹೊಸದಿಲ್ಲಿಯಿಂದ ಬೆಳಗ್ಗೆ 5.15 ಕ್ಕೆ ಹೊರಟು ಮಂಗಳೂರನ್ನು ಬೆಳಗ್ಗೆ 8.30 ಕ್ಕೆ ತಲುಪಲಿದೆ. ವಾರದ ಇತರ ದಿನಗಳಲ್ಲಿ ಐಎಕ್ಸ್ 1276 ಮಂಗಳೂರಿನಿಂದ ಬೆಳಗ್ಗೆ 08.30ಕ್ಕೆ ಹೊರಟು, ಮಧ್ಯಾಹ್ನ 11.45 ಕ್ಕೆ ಹೊಸದಿಲ್ಲಿಯನ್ನು ತಲುಪಲಿದೆ. ಐ ಎಕ್ಸ್ 1275 ಹೊಸದಿಲ್ಲಿಯಿಂದ ಬೆಳಗ್ಗೆ 5 ಕ್ಕೆ ಹೊರಟು ಬೆಳಗ್ಗೆ 8 ಗಂಟೆಗೆ ಮಂಗಳೂರು ತಲುಪಲಿದೆ.