ನವದೆಹಲಿ, ಏಪ್ರಿಲ್ 07: ಟಾಟಾ ಸಮೂಹದ ಒಡೆತನದ ದಿಗ್ಗಜ ವಿಮಾನಯಾನ ಸಂಸ್ಥೆ ‘ಏರ್ ಇಂಡಿಯಾ’ದ (Air India) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕ (MD) ಕ್ಯಾಂಪ್ಬೆಲ್ ವಿಲ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದರೂ, ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಮತ್ತು ಭದ್ರತಾ ಸವಾಲುಗಳ ನಡುವೆ ಈ ಬೆಳವಣಿಗೆಯು ವಿಮಾನಯಾನ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕಳೆದ ಕೆಲವು ವರ್ಷಗಳಿಂದ ಏರ್ ಇಂಡಿಯಾ ಹಲವು ಏರಿಳಿತಗಳನ್ನು ಕಾಣುತ್ತಿದ್ದು, 2026ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ಸುಮಾರು 20,000 ಕೋಟಿ ರೂಪಾಯಿಗಳ ಭಾರಿ ನಷ್ಟ ಅನುಭವಿಸಬಹುದು ಎಂದು ಅಂದಾಜಿಸಲಾಗಿದೆ. ಇದರ ಬೆನ್ನಲ್ಲೇ ಕಳೆದ ವರ್ಷ ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನ ಅಪಘಾತದ ನಂತರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸಂಸ್ಥೆಯ ಸುರಕ್ಷತಾ ಮಾನದಂಡಗಳ ಬಗ್ಗೆ ಕಠಿಣ ನಿಗಾ ವಹಿಸಿದೆ. ಪಾಕಿಸ್ತಾನ ವಾಯುಪ್ರದೇಶ ಬಂದ್ ಆಗಿರುವುದು ಮತ್ತು ಜಾಗತಿಕ ಇಂಧನ ಬೆಲೆ ಏರಿಕೆಯೂ ಸಂಸ್ಥೆಯ ಮೇಲೆ ಒತ್ತಡ ಹೇರಿದೆ.
ಜೂನ್ 2022 ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ವಿಲ್ಸನ್, ಸುಮಾರು ನಾಲ್ಕು ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಅವರ ನೇತೃತ್ವದಲ್ಲಿ ಏರ್ ಇಂಡಿಯಾ ಮತ್ತು ವಿಸ್ತಾರಾ (Vistara) ವಿಮಾನಯಾನ ಸಂಸ್ಥೆಗಳ ವಿಲೀನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಸಂಸ್ಥೆಯ ಆಧುನೀಕರಣಕ್ಕಾಗಿ ನೂರಾರು ಹೊಸ ವಿಮಾನಗಳ ಖರೀದಿಗೆ ಬೃಹತ್ ಒಪ್ಪಂದ ಮಾಡಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ವಿಲ್ಸನ್ ಅವರ ರಾಜೀನಾಮೆಯನ್ನು ಬೋರ್ಡ್ ಅಂಗೀಕರಿಸಿದ್ದು, ಸುಗಮ ಅಧಿಕಾರ ಹಸ್ತಾಂತರದ ದೃಷ್ಟಿಯಿಂದ ಅವರು ಸೆಪ್ಟೆಂಬರ್ 2026ರ ವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಟಾಟಾ ಸಮೂಹವು ಈಗಾಗಲೇ ನೂತನ ಸಿಇಒ ಹುಡುಕಾಟಕ್ಕಾಗಿ ಜಾಗತಿಕ ಮಟ್ಟದ ಶೋಧ ಸಮಿತಿಯನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.