ರಾಯಚೂರು, ಏಪ್ರಿಲ್ 18: ಸಮುದಾಯ ಭವನದ ನಾಮಫಲಕ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಮಾನ್ವಿ ತಾಲ್ಲೂಕಿನ ಬೈಲ್ ಮರ್ಚೇಡ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ 8 ವರ್ಷದ ಬಾಲಕ ವಿಶ್ವನಾಥ್ ಹಾಗೂ ಕೇವಲ 1.6 ವರ್ಷದ ಹಸುಗೂಸು ಸನ್ವಿತಾ ದುರ್ಮರಣಕ್ಕೀಡಾಗಿದ್ದಾರೆ. ಸಿಮೆಂಟ್ ಬೋರ್ಡ್ ಅಡಿಯಲ್ಲಿ ಸಿಲುಕಿದ ಬಸಮ್ಮ (38) ಅವರ ಒಂದು ಕಾಲು ಕತ್ತರಿಸಲ್ಪಟ್ಟಿದ್ದರೆ, ಅವರ ಮಗಳು ಲಕ್ಷ್ಮಿ (17) ಅವರ ಎರಡು ಕಾಲುಗಳು ಕಟ್ ಆಗಿವೆ. ಇವರೊಂದಿಗೆ ವಿಶಾಲಮ್ಮ (20) ಮತ್ತು 4 ವರ್ಷದ ಮಗು ಯಲ್ಲಮ್ಮ ಎಂಬುವವರಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳುಗಳೆಲ್ಲರೂ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಯಲಾಟವನ್ನು ವೀಕ್ಷಿಸಲು ಇಡೀ ಗ್ರಾಮವೇ ಸಂಭ್ರಮದಿಂದ ಜಮಾಯಿಸಿತ್ತು. ಚಾವಡಿ ಕಟ್ಟೆಯ ಕೆಳಗೆ ಕುಳಿತು ಕುತೂಹಲದಿಂದ ನಾಟಕ ವೀಕ್ಷಿಸುತ್ತಿದ್ದ ಜನರ ಮೇಲೆ, ಕಟ್ಟಡದ ಮೇಲ್ಭಾಗದಲ್ಲಿದ್ದ ಶಿಥಿಲಗೊಂಡ ಸಿಮೆಂಟ್ ಬೋರ್ಡ್ ಆಯತಪ್ಪಿ ಬಿದ್ದಿದೆ. ಮಾನ್ವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.