Connect with us

    LATEST NEWS

    ಅಹಮದಾಬಾದ್ ಸ್ಪೋಟದಲ್ಲಿ ಗಲ್ಲು ಶಿಕ್ಷೆಗೊಳಗಾದವರಲ್ಲಿ ಇಬ್ಬರು ಮಂಗಳೂರಿನವರು

    ಮಂಗಳೂರು : 2008ರ ಅಹಮ್ಮದಾಬಾದ್‌ನಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ಒಳಗಾದ 38 ಮಂದಿ ಅಪರಾಧಿಗಳಲ್ಲಿ ಇಬ್ಬರು ಮಂಗಳೂರು ಮೂಲದವರಾಗಿದ್ದಾರೆ. ಮಂಗಳೂರಿನವರಾದ ಹಳೆಯಂಗಡಿಯ ಅಹ್ಮದ್‌ ಬಾವಾ ಅಬೂಬಕರ್‌ (38), ಮಂಗಳೂರಿನ ಪಾಂಡೇಶ್ವರದ ಸುಭಾಸ್‌ನಗರದ ಸೈಯದ್‌ ಮೊಹಮದ್‌ ನೌಶಾದ್‌ (30) ಎಂದು ವರದಿಯಾಗಿದೆ.


    ಅಪರಾಧಿಗಳೆಲ್ಲ ಉಡುಪಿಯಿಂದ ಸ್ಫೋಟಕವನ್ನು ಖರೀದಿಸಿ ಅದನ್ನು ಗುಜರಾತಿನ ಸೂರತ್‌ಗೆ ತೆಗೆದುಕೊಂಡು ಹೋಗುತಿದ್ದರು, ಅಲ್ಲದೆ ಗುಜರಾತ್‌ನಲ್ಲಿ ಬಾಂಬ್‌ ತಯಾರಿಸುತ್ತಿದ್ದರು. ಸೂರತ್‌ ಮತ್ತು ಅಹ್ಮದಾಬಾದ್‌ನ ವಿವಿಧೆಡೆಗಳಲ್ಲಿ ಇರಿಸಿ ಅಲ್ಲಿಂದ ರೈಲು ಹತ್ತಿ ಪೂನಾ ಕಡೆಗೆ ಪ್ರಯಾಣಿಸಿದ್ದರು. ಅರ್ಧ ದಾರಿಗೆ ತಲುಪಿದಾಗ ಅಹ್ಮದಾಬಾದ್‌ನಲ್ಲಿ ಬಾಂಬ್‌ ಸ್ಫೋಟ ಆಗಿರುವ ಮಾಹಿತಿ ಲಭಿಸಿತ್ತು. ಸೂರತ್‌ನಲ್ಲಿರಿಸಿದ್ದ ಬಾಂಬ್‌ಗೆ ಸರ್ಕ್ಯೂಟ್ ಜೋಡಣೆ ಸರಿಯಾಗದೆ ಸ್ಫೋಟಿಸಿರಲಿಲ್ಲ.


    ಈ ಪ್ರಕರಣದ ಬೆನ್ನತ್ತಿದ ಪೊಲೀಸರು 2008ರಲ್ಲಿ ಉಳ್ಳಾಲದ ಮುಕ್ಕಚ್ಚೇರಿ, ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಮತ್ತು ಬಳಿಕ ಪಾಂಡೇಶ್ವರದ ಸುಭಾಸ್‌ನಗರ ಹಾಗೂ ಇತರ ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಅಂದು ಮುಕ್ಕಚ್ಚೇರಿಯ ಮಹಮ್ಮದ್‌ ಅಲಿ, ಜಾವೇದ್‌ ಅಲಿ, ಸುಭಾಸ್‌ನಗರದ ನೌಶಾದ್‌ ಮತ್ತು ಹಳೆಯಂಡಿಯ ಅಹ್ಮದ್‌ ಬಾವಾನನ್ನು ಬಂಧಿಸಿದ್ದರು. ಅನಂತರದ ದಿನಗಳಲ್ಲಿ ಪಡುಬಿದ್ರೆಯ ಉಚ್ಚಿಲ ಮತ್ತು ಚಿಕ್ಕಮಗಳೂರಿನಲ್ಲಿ ಹಾಗೂ ಗುಜರಾತ್‌, ಮಹಾರಾಷ್ಟ್ರಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ನೂ 6 ಮಂದಿಯನ್ನು ಬಂಧಿಸಿದ್ದರು.

    ನೌಷಾದ್‌ನ ಸುಭಾಷ್‌ನಗರದ ಮನೆ ಐಎಂ ಉಗ್ರರು ಸಮಾಲೋಚನೆ ನಡೆಸುವ ತಾಣವಾಗಿತ್ತು. 2008ರಲ್ಲಿ ಆತನ ಬಂಧನದ ಜತೆಗೆ ಜಿಹಾದಿ ಸಾಹಿತ್ಯ, ಕಚ್ಚಾ ಬಾಂಬ್​, ಹಾರ್ಡ್‌ ಡಿಸ್ಕ್‌, ಮೊಬೈಲ್‌ ಇತ್ಯಾದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

    ನೌಷಾದ್‌ ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು, ಆತನಿಗೆ ಸರ್ಕಿಟ್‌ ತಯಾರಿಕೆ ಗೊತ್ತಿತ್ತು. ಅಮೋನಿಯಂ ನೈಟ್ರೇಟ್‌ ಬಳಸಿ ಸರ್ಕಿಟ್‌ ಜೋಡಿಸಿದ್ದನ್ನು ಸೂರತ್‌ಗೆ ಕೊಂಡೊಯ್ಯಲಾಗುತ್ತಿತ್ತು. ಅಲ್ಲಿ ಇಕ್ಬಾಲ್‌ ಭಟ್ಕಳ್‌ ಎಂಬ ಉಗ್ರ ಡೆಟೋನೇಟರ್‌ಗಳನ್ನು ಜೋಡಿಸಿ ಸ್ಫೋಟಕ್ಕೆ ಬಳಸುತ್ತಿದ್ದ ಎನ್ನುವುದು ಹಿಂದೆ ವಿಚಾರಣೆಯಲ್ಲಿ ಬಯಲಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply