ಟೆಹ್ರಾನ್ ಮಾರ್ಚ್ 23: ಇರಾನ್ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಐದು ದಿನಗಳ ಕಾಲ ಅಮಾನತ್ತಿನಲ್ಲಿಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಯನ್ನು ಇರಾನ್ ಮಾಧ್ಯಮಗಳು ಕಟುವಾಗಿ ಟೀಕಿಸಿವೆ. ಇದು ಅಮೆರಿಕದ ಉದಾರತೆಯಲ್ಲ, ಬದಲಿಗೆ ಇರಾನ್ನ ಮಿಲಿಟರಿ ಶಕ್ತಿಗೆ ಹೆದರಿ ಟ್ರಂಪ್ ಹಿಂದೆ ಸರಿದಿದ್ದಾರೆ ಎಂದು ಇರಾನ್ನ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.

“ಅಮೆರಿಕದೊಂದಿಗೆ ಯಾವುದೇ ನೇರ ಅಥವಾ ಪರೋಕ್ಷ ಮಾತುಕತೆಗಳು ನಡೆಯುತ್ತಿಲ್ಲ” ಎಂದು ಇರಾನ್ನ ಪ್ರೆಸ್ ಟಿವಿ ಸ್ಪಷ್ಟಪಡಿಸಿದೆ. ಟ್ರಂಪ್ ಉಲ್ಲೇಖಿಸಿರುವ ‘ ಮಾತುಕತೆ ಎಂಬುದು ಸುಳ್ಳು ಮತ್ತು ಇದು ಕೇವಲ ಅಮೆರಿಕದ ಹತಾಶೆಯನ್ನು ತೋರಿಸುತ್ತದೆ ಎಂದು ಇರಾನ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಇರಾನ್ನ ಪಟ್ಟು ಸಡಿಲಗೊಂಡಿಲ್ಲ ಎಂದು ಮಾಧ್ಯಮಗಳು ಎಚ್ಚರಿಸಿವೆ.
ಇರಾನ್ನ ರಾಷ್ಟ್ರೀಯ ಭದ್ರತಾ ಆಯೋಗದ ವಕ್ತಾರ ಇಬ್ರಾಹಿಂ ರೆಝಾಯಿ ಅವರು, “ಟ್ರಂಪ್ ಮತ್ತೆ ಹಿಂದೆ ಸರಿದಿದ್ದಾರೆ, ಇದು ಅಮೆರಿಕಕ್ಕೆ ಆದ ಮತ್ತೊಂದು ಸೋಲು” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್ನ ತಡೆಗಟ್ಟುವಿಕೆ ತಂತ್ರ (Deterrence) ಕೆಲಸ ಮಾಡುತ್ತಿದ್ದು, ಅಮೆರಿಕ ಮತ್ತು ಪಶ್ಚಿಮ ರಾಷ್ಟ್ರಗಳ ಮೇಲಿನ ಆರ್ಥಿಕ ಒತ್ತಡವೇ ಟ್ರಂಪ್ ಅವರನ್ನು ಈ ನಿರ್ಧಾರಕ್ಕೆ ಬರುವಂತೆ ಮಾಡಿದೆ ಎಂದು ಟೆಹ್ರಾನ್ ಟೈಮ್ಸ್ ವರದಿ ಮಾಡಿದೆ.