ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿಗೂ ಅಧಿಕ ಗಳಿಕೆ ಕಂಡು ಐತಿಹಾಸಿಕ ಯಶಸ್ಸು ದಾಖಲಿಸಿರುವ ಬಾಲಿವುಡ್ನ ‘ಧುರಂಧರ್ 2’ (Dhurandhar 2) ಸಿನಿಮಾ ಈಗ ಕಥೆ ಕಳ್ಳತನದ ವಿವಾದಕ್ಕೆ ಸಿಲುಕಿದೆ. ಚಿತ್ರದ ಕಥೆಗಾರ ಹಾಗೂ ನಿರ್ದೇಶಕ ಆದಿತ್ಯ ಧಾರ್ ವಿರುದ್ಧ ಕಥೆಗಾರ ಸಂತೋಷ್ ಕುಮಾರ್ ಆರ್ಎಸ್ ಕೃತಿಚೌರ್ಯದ ಗಂಭೀರ ಆರೋಪ ಮಾಡಿದ್ದು, ಪ್ರಕರಣ ಈಗ ಕಾನೂನು ಹಂತಕ್ಕೆ ತಲುಪಿದೆ.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಸಂತೋಷ್ ಕುಮಾರ್, “ಧುರಂಧರ್ 2 ಚಿತ್ರದ ಸಂಪೂರ್ಣ ಕಥೆ ನನ್ನದು. 2023ರ ನವೆಂಬರ್ನಲ್ಲಿ ನಾನು ‘ಡಿ-ಸಾಹೇಬ್’ (D-Saheb) ಎಂಬ ಹೆಸರಿನಲ್ಲಿ ಈ ಚಿತ್ರಕಥೆಯನ್ನು ‘ಚಿತ್ರಕಥೆಗಾರರ ಸಂಘ’ದಲ್ಲಿ (SWA) ನೋಂದಾಯಿಸಿದ್ದೆ. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಿಗೆ ಮತ್ತು ಕಲಾವಿದರಿಗೆ ಈ ಕಥೆಯನ್ನು ಈ ಹಿಂದೆಯೇ ಕಳುಹಿಸಿದ್ದೆ. ಆದರೆ ಚಿತ್ರತಂಡ ನನ್ನ ಅನುಮತಿಯಿಲ್ಲದೆ ಕಥೆಯನ್ನು ಬಳಸಿಕೊಂಡು ಸಿನಿಮಾ ಮಾಡಿದೆ,” ಎಂದು ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಕಥೆಯನ್ನು ಚಿತ್ರತಂಡ ‘ರಾಜಕೀಯ ಪ್ರೊಪಗಾಂಡಾ’ಕ್ಕಾಗಿ ಬಳಸಿಕೊಂಡಿದೆ ಎಂದೂ ಅವರು ಆಕ್ರೋಶ ಹೊರಹಾಕಿದ್ದಾರೆ.
ಸಂತೋಷ್ ಕುಮಾರ್ ಅವರ ಈ ಆರೋಪಗಳನ್ನು ನಿರ್ದೇಶಕ ಆದಿತ್ಯ ಧಾರ್ ತಂಡ ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ಕುರಿತು ಇದುವರೆಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡದ ಧಾರ್, ಕಾನೂನಾತ್ಮಕವಾಗಿಯೇ ಉತ್ತರಿಸಲು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ, ಆದಿತ್ಯ ಧಾರ್ ಅವರು ಈಗಾಗಲೇ ಸಂತೋಷ್ ಕುಮಾರ್ ಅವರಿಗೆ ವಕೀಲರ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. “ಈ ಚಿತ್ರದ ಸ್ಕ್ರಿಪ್ಟ್ ಅನ್ನು ಸೆಪ್ಟೆಂಬರ್ 2023ರಲ್ಲೇ ನೋಂದಾಯಿಸಲಾಗಿದ್ದು, ಸಂತೋಷ್ ಕುಮಾರ್ ಅವರ ನೋಂದಣಿಗಿಂತಲೂ ಇದು ಹಳೆಯದಾಗಿದೆ. ಸುಳ್ಳು ಆರೋಪಗಳ ಮೂಲಕ ಚಿತ್ರದ ಯಶಸ್ಸಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ,” ಎಂಬುದು ಚಿತ್ರತಂಡದ ವಾದವಾಗಿದೆ.
ಚಿತ್ರತಂಡದ ನೋಟಿಸ್ಗೆ ಕಿಂಚಿತ್ತೂ ಎದೆಗುಂದದ ಸಂತೋಷ್ ಕುಮಾರ್, “ನನಗೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ, ಕೇವಲ ನನ್ನನ್ನು ಮೌನವಾಗಿರಿಸಲು ಒತ್ತಡ ಹೇರಲಾಗುತ್ತಿದೆ. ನಾನು ಕಾನೂನುಬದ್ಧವಾಗಿ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುತ್ತೇನೆ,” ಎಂದು ಎಚ್ಚರಿಸಿದ್ದಾರೆ. ‘ಧುರಂಧರ್’ ಬಿಡುಗಡೆಯಾಗಿ ನಾಲ್ಕು ತಿಂಗಳು ಹಾಗೂ ‘ಧುರಂಧರ್ 2’ ಬಿಡುಗಡೆಯಾಗಿ ಕೇವಲ ಎರಡು ವಾರ ಕಳೆದಿರುವ ಈ ಸಂದರ್ಭದಲ್ಲಿ ಈ ವಿವಾದ ಸೃಷ್ಟಿಯಾಗಿರುವುದು ಸಿನಿಮಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಆದಿತ್ಯ ಧಾರ್ ಅವರು ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆಸುತ್ತಿದ್ದರೆ, ಸಂತೋಷ್ ಕುಮಾರ್ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ.