ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿಯಿಂದ ಅಮೃತಾ ಅಲಿಯಾಸ್ ಅಮ್ಮು ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನಟಿ ರಕ್ಷಿತಾ ಹೊರಬಂದಿದ್ದಾರೆ. ಅವರ ನಿರ್ಗಮನದ ಸುದ್ದಿ ಧಾರಾವಾಹಿ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಧಾರಾವಾಹಿಯಲ್ಲಿ ಆದಿ–ಲಕ್ಷ್ಮೀ ಜೋಡಿಯ ಜೊತೆಗೆ ಸಂಜೀವ್ ಮತ್ತು ಅಮೃತಾ ಜೋಡಿಯೂ ಪ್ರೇಕ್ಷಕರ ಗಮನ ಸೆಳೆದಿತ್ತು. ವಿಶೇಷವಾಗಿ ಅಮ್ಮು ಪಾತ್ರದ ಮೂಲಕ ರಕ್ಷಿತಾ ಸರಳ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಇದೀಗ ಆ ಪಾತ್ರದಲ್ಲಿ ಬದಲಾವಣೆ ಆಗಿದ್ದು, ‘ಪಾರು’ ಧಾರಾವಾಹಿ ಖ್ಯಾತಿಯ ನಟಿ ಮಾನ್ಸಿ ಜೋಶಿ ಅಮೃತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಈ ಕುರಿತು ನಟಿ ರಕ್ಷಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. “ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಆದರೆ ಕೆಲವು ಪರಿಸ್ಥಿತಿಗಳ ಕಾರಣದಿಂದ ಈ ಮಾತು ಬರೆಯಬೇಕಾದ ಪರಿಸ್ಥಿತಿ ಬಂದಿದೆ. ‘ಆದಿಲಕ್ಷ್ಮೀ ಪುರಾಣ’ದಲ್ಲಿ ಅಮ್ಮು ಪಾತ್ರ ಮಾಡುವುದು ನನಗೆ ತುಂಬಾ ವಿಶೇಷವಾದ ಪ್ರಯಾಣವಾಗಿತ್ತು,” ಎಂದು ಅವರು ತಿಳಿಸಿದ್ದಾರೆ.

ಅಭಿಮಾನಿಗಳಿಂದ ಬರುತ್ತಿರುವ ಸಂದೇಶಗಳು ತಮ್ಮನ್ನು ಭಾವುಕರನ್ನಾಗಿಸುತ್ತಿವೆ ಎಂದು ರಕ್ಷಿತಾ ಹೇಳಿದ್ದಾರೆ. “ನೀವು ಅಮ್ಮು ಪಾತ್ರವನ್ನು ಎಷ್ಟು ಇಷ್ಟಪಡುತ್ತೀರೋ ಎಂಬುದನ್ನು ಹೇಳುವ ಮೆಸೇಜ್ಗಳನ್ನು ಓದಿದಾಗ ನನ್ನ ಕಣ್ಣಲ್ಲಿ ನೀರು ಬರುತ್ತದೆ. ನಾನು ಈ ಧಾರಾವಾಹಿಯನ್ನು ಇನ್ನೂ ಬಹಳ ಕಾಲ ಮಾಡುತ್ತೇನೆ ಎಂದು ಭಾವಿಸಿದ್ದೆ. ಆದರೆ ಕೆಲವು ಅನಿವಾರ್ಯ ಪರಿಸ್ಥಿತಿಗಳ ಕಾರಣದಿಂದ ಈಗ ಈ ಧಾರಾವಾಹಿಗೆ ವಿದಾಯ ಹೇಳಬೇಕಾಗಿದೆ,” ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ ಧಾರಾವಾಹಿಯ ಸಂಪೂರ್ಣ ತಂಡಕ್ಕೂ ಅವರು ಧನ್ಯವಾದ ತಿಳಿಸಿದ್ದಾರೆ. “ಈ ಸುಂದರ ಪ್ರಯಾಣಕ್ಕೆ ಕಾರಣವಾದ ನಮ್ಮ ತಂಡದ ಎಲ್ಲರಿಗೂ ಹಾಗೂ ತಾಂತ್ರಿಕ ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳು. ವಿಶೇಷವಾಗಿ ಜೀ ಕನ್ನಡ ವಾಹಿನಿ, ಸುಧೀಂದ್ರ ಸರ್ ಮತ್ತು ಸಂತೋಷ್ ಕೋಟೀ ಸರ್ ಅವರಿಗೆ ಈ ಅವಕಾಶ ನೀಡಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ,” ಎಂದು ರಕ್ಷಿತಾ ಹೇಳಿದ್ದಾರೆ.
ಇದು ಅಂತ್ಯವಲ್ಲ, ಹೊಸ ಆರಂಭ ಎಂದು ಹೇಳಿದ ಅವರು, ಮುಂದಿನ ಪ್ರಾಜೆಕ್ಟ್ಗಳಲ್ಲಿಯೂ ಅಭಿಮಾನಿಗಳ ಬೆಂಬಲ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. “ಅಮ್ಮು ಪಾತ್ರ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿಯೇ ಉಳಿಯುತ್ತದೆ,” ಎಂದು ಅವರು ತಿಳಿಸಿದ್ದಾರೆ.