Connect with us

    LATEST NEWS

    ಪ್ರಾಕೃತಿಕ ವಿಕೋಪ ಸಮಗ್ರ ವರದಿ ಸಂಗ್ರಹ

    ಪ್ರಾಕೃತಿಕ ವಿಕೋಪ ಸಮಗ್ರ ವರದಿ ಸಂಗ್ರಹ

    ಉಡುಪಿ ಜೂನ್ 12: ಜಿಲ್ಲೆಯಲ್ಲಿ ಮಳೆ ಗಾಳಿಯಿಂದಾಗಿ ಸಂಭವಿಸಿರುವ ಜೀವ ಹಾನಿ ಮತ್ತು ಸ್ವತ್ತುಗಳ ಹಾನಿಯ ಸಮಗ್ರ ವರದಿಯನ್ನು ನೀಡುವಂತೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ 14.6.18ರಂದು ಮುಖ್ಯಮಂತ್ರಿಗಳು ಸಭೆ ಕರೆದ ಹಿನ್ನಲೆಯಲ್ಲಿ ಮಳೆ ಹಾನಿ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಹಾಲ್‍ನಲ್ಲಿ ಇಂದು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು.

    ಈಗಾಗಲೇ ಈವರೆಗೆ ಒಟ್ಟು 3 ಮಾನವ ಜೀವ ಹಾನಿ ಸಂಭವಿಸಿದ್ದು 14 ಲಕ್ಷ ರೂ.ಗಳ ಪರಿಹಾರ ಪಾವತಿಸಲಾಗಿದೆ. ಒಟ್ಟು 6 ಜಾನುವಾರುಗಳು ಮೃತಪಟ್ಟಿದ್ದು 1.08 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸಲಾಗಿದೆ ಎಂದು ಅವರು, 492 ವಾಸದ ಮನೆಗಳಿಗೆ ಹಾನಿಯಾಗಿದ್ದು ಪರಿಹಾರವಾಗಿ 21.97 ಲಕ್ಷ ರೂ ಪಾವತಿಸಿದೆ, ತೋಟಗಾರಿಕೆ ಬೆಳೆ ಹಾನಿಯಲ್ಲಿ 1.50 ಲಕ್ಷವನ್ನು 46 ಪ್ರಕರಣಗಳಲ್ಲಿ ವಿತರಿಸಿದ್ದು , ಒಟ್ಟು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಪರಿಹಾರವಾಗಿ ಇದುವರೆವಿಗೆ 547 ಪ್ರಕರಣಗಳಲ್ಲಿ 38.55 ಲಕ್ಷ ರೂ. ಪಾವತಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.

    ಇದಲ್ಲದೆ ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆಯಿಂದ ಹಾನಿಯ ವರದಿ ನೀಡಲು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರಲ್ಲದೆ, ಎಲ್ಲ ತಹಸೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ನಾಶ ನಷ್ಟದ ಮಾಹಿತಿ ಮತ್ತು ಪರಿಹಾರ ಕೋರಿ ತಕ್ಷಣವೇ ವರದಿ ನೀಡಲು ಸೂಚಿಸಿದರು.

    ಮಳೆಯಿಂದಾಗುವ ಹಾನಿ ನಿಭಾಯಿಸಲು ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಗ್ರಾಮ ಪಂಚಾಯತ್‍ವಾರು ಗ್ರಾಮೀಣ ಮಟ್ಟದ ತಂಡ ರಚಿಸಲಾಗಿದೆ. ಜೀವ ಹಾನಿ ತಡೆಗೆ ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳುವ ಕುರಿತು ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಜಿಲ್ಲೆಯ ಅಗ್ನಿಶಾಮಕ ಠಾಣೆಗಳಿಗೆ 7.50 ಲಕ್ಷ ರೂ.ಗಳ ರಕ್ಷಣ ಸಲಕರಣೆಗಳನ್ನು ಒದಗಿಸಲಾಗಿದೆ ಎಂದರು.

    ಮೆಸ್ಕಾಂನ ಸುಮಾರು 1.896 ಕಂಬಗಳು ಬಿದ್ದಿದ್ದು, 240 ಟ್ರಾನ್ಸ್ಫರ್ಮರ್‍ಗಳು ಸುಟ್ಟು ಹೋಗಿವೆ. ಒಟ್ಟು 214.06 ಲಕ್ಷ ರೂ .ಗಳ ನಾಶ ನಷ್ಟ ಸಂಭವಿಸಿದ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು. ಕಾಪುವಿನಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ನೀರು ನಿಲ್ಲದಂತೆ ಚರಂಡಿಯನ್ನು ತೆರವುಗೊಳಿಸಿದ್ದರಿಂದ 20 ಲಕ್ಷ ರೂ. ನಷ್ಟವಾಗಿದೆ ಎಂದು ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಸಭೆಗೆ ತಿಳಿಸಿದರು.
    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ 81.83 ಕಿ.ಮೀ ರಸ್ತೆಗಳು ಮಳೆಯಿಂದ ಹಾಳಾಗಿದ್ದು, 426 ಲಕ್ಷ ಈವರೆಗೆ ನಷ್ಟವಾಗಿದೆ ಎಂದು ಮುಖ್ಯ ಇಂಜಿನಿಯರ್ ವಿವರಿಸಿದರು. ತೋಟಗಾರಿಕಾ ಉಪನಿರ್ದೇಶಕರು ಮಾಹಿತಿ ನೀಡಿ, 96 ಪ್ರಕರಣಗಳಲ್ಲಿ 17.287 ವಿಸ್ತೀರ್ಣದಲ್ಲಿ 22.87 ಲಕ್ಷ ರೂ.ಗಳ ಬೆಳೆ ನಷ್ಟವನ್ನು ಅಂದಾಜಿಸಲಾಗಿದೆ ಎಂದರು.

    ಒತ್ತಿನೆಣೆಯಲ್ಲಿ ಭೂಕುಸಿತ ಸಂಭವಿಸಿಲ್ಲ ಎಂದು ಸ್ಪಷ್ಟ ಪಡಿಸಿದ ನವಯುಗ್ ನ ಅಧಿಕಾರಿ, ದೂರುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಅಪರ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟೀಕರಣ ನೀಡಿದರು. ರಸ್ತೆಯ ಪಕ್ಕದ ಮನೆಗಳಿಗೆ ಮಣ್ಣು ನೀರಿನೊಂದಿಗೆ ಬಂದಿರುವುದನ್ನು ತಕ್ಷಣವೇ ತೆರವುಗೊಳಿಸಲಾಗಿದೆ ಎಂದು ಉತ್ತರಿಸಿದರು.

    ನಗರ ಪ್ರದೇಶ ವ್ಯಾಪ್ತಿಯಲ್ಲಿ ಕೃತಕ ನೆರೆ ತಡೆಯಲು ಚರಂಡಿ ಶುಚಿ ಗೊಳಿಸಲು, ಸಾಂಕ್ರಾಮಿಕ ರೋಗ ತಡೆಗೆ ಸಂಬಂಧ ಪಟ್ಟ ಇಲಾಖೆ ಸಜ್ಜಾಗಿರಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.

     

    Share Information
    Advertisement
    Click to comment

    You must be logged in to post a comment Login

    Leave a Reply