ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಮಾರಿದ ಕೇಂದ್ರ ಸರ್ಕಾರ

ಮಂಗಳೂರು ಫೆಬ್ರವರಿ 25: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಕಂಪೆನಿ ಪಡೆದುಕೊಂಡಿದ್ದು, ಮುಂದಿನ 50 ವರ್ಷಗಳ ಕಾಲ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಖಾಸಗಿ ಕಂಪೆನಿಯ ಪಾಲಾಗಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕೈಯಲ್ಲಿರುವ 6 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಕ್ಕೆ ಕೇಂದ್ರ ಸರಕಾರ ನಿರ್ಧರಿಸಿತ್ತು, ಈ ಹಿನ್ನಲೆಯಲ್ಲಿ ಇಂದು ಹರಾಜು ಪ್ರಕ್ರಿಯೆ ನಡೆದಿದ್ದು, ಹರಾಜು ಪ್ರಕ್ರಿಯೆಯಲ್ಲಿ ಅದಾನಿ ಕಂಪೆನಿ ಅತಿ ಹೆಚ್ಚು ಬಿಡ್ಡ ಸಲ್ಲಿಸಿ ಮಂಗಳೂರು, ಅಹಮದಾಬಾದ್, ಜೈಪುರ, ತಿರುವನಂತಪುರಂ, ಲಕ್ನೋ ವಿಮಾನ ನಿಲ್ದಾಣವನ್ನು ಪಡೆದುಕೊಂಡಿದೆ.

ಈ ಮೂಲಕ ಮೂಲಭೂತ ಸೌಕರ್ಯ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ ಈಗ ಅಧಿಕೃತವಾಗಿ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದೆ.

ಅದಾನಿ ಕಂಪನಿಗೆ ಬೆಂಗಳೂರು ಮೂಲದ ಜಿಎಂಆರ್ ಗ್ರೂಪ್ ಪ್ರಬಲ ಪೈಪೋಟಿಯನ್ನು ನೀಡಿತ್ತು.

ಆದರೆ ಅದಾನಿ ಕಂಪನಿ ಅತಿ ಹೆಚ್ಚು ಮೊತ್ತದ ಬಿಡ್ ಸಲ್ಲಿಸಿದ ಕಾರಣ 6ರ ಪೈಕಿ 5 ನಿಲ್ದಾಣವನ್ನು ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಗುವಾಹಾಟಿ ವಿಮಾನ ನಿಲ್ದಾಣವನ್ನು ಖಾಸಗಿಕರಣಗೊಳಿಸುವುದನ್ನು ವಿರೋಧಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೋಗಿ ತಡೆ ನೀಡಬೇಕೆಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ಮಂಗಳವಾರ ನಡೆಯಲಿದೆ.

ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ಸಂಬಂಧ 2018ರ ನವೆಂಬರ್ ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಆಧಾರದ ಮೇಲೆ ಆರು ಎಎಐ ವ್ಯಾಪ್ತಿಯ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಪ್ರಸ್ತಾಪವನ್ನು ಸರ್ಕಾರ ಅಂತಿಮಗೊಳಿಸಿ ಇಂದು ಬಿಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ಕೆಲವೇ ದಿನಗಳಲ್ಲಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಧಿಕೃತವಾಗಿ ಈ ವಿಮಾನ ನಿಲ್ದಾಣಗಳ ಉಸ್ತುವಾರಿಯನ್ನು ಅದಾನಿ ಕಂಪನಿ ನೋಡಿಕೊಳ್ಳಲಿದೆ.

Facebook Comments

comments