ಬೆಂಗಳೂರು ಮಾರ್ಚ್ 18: ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಅಶ್ಲೀಲ ಸಾಹಿತ್ಯದ ವಿವಾದ ಇದೀಗ ಇಡೀ ದೇಶದಲ್ಲೇ ಸುದ್ದಿಯಲ್ಲಿದೆ. ಇದೀಗ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದ ಬಾಲಿವುಡ್ ನಟಿ ನೋರಾ ಫತೇಹಿ ಮೌನ ಮುರಿದಿದ್ದಾರೆ. ಈ ವಿವಾದಾತ್ಮಕ ಹಾಡಿನ ಹಿಂದಿ ಅವತರಣಿಕೆಯ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ನಿರ್ದೇಶಕರು ತನ್ನ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ನೋರಾ ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿರುವ ನೋರಾ, “ಕನ್ನಡ ಭಾಷೆ ನನಗೆ ತಿಳಿಯುವುದಿಲ್ಲ. ಮೂರು ವರ್ಷಗಳ ಹಿಂದೆ ಈ ಹಾಡನ್ನು ಚಿತ್ರೀಕರಿಸುವಾಗ ಸಾಹಿತ್ಯದ ಅರ್ಥ ತಿಳಿಯಲು ನಾನು ಚಿತ್ರತಂಡದ ಮೇಲೆ ಅವಲಂಬಿತಳಾಗಿದ್ದೆ. ಅವರು ವಿವರಿಸಿದಾಗ ನನಗೆ ಯಾವುದೂ ಅಸಭ್ಯ ಎಂದು ಅನಿಸಿರಲಿಲ್ಲ. ಆದರೆ ಈಗ ಹಿಂದಿಗೆ ಭಾಷಾಂತರ ಮಾಡಿರುವ ರೀತಿ ಅತ್ಯಂತ ಆಕ್ಷೇಪಾರ್ಹವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಚಿತ್ರತಂಡದ ವಿರುದ್ಧ ಕಿಡಿಕಾರಿರುವ ಅವರು, “ನನ್ನ ಮತ್ತು ಸಂಜಯ್ ದತ್ ಅವರ ಫೋಟೋಗಳನ್ನು ಎಐ (AI) ಮೂಲಕ ಸೃಷ್ಟಿಸಿ ಅಸಭ್ಯವಾಗಿ ಬಳಸಲಾಗಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲೇ ನನಗೆ ಕಿರಿಕಿರಿ ಉಂಟಾಗಿತ್ತು. ಇದು ವಿವಾದವಾಗುತ್ತದೆ ಎಂದು ಗೊತ್ತಾದ ಕೂಡಲೇ ನಾನು ಚಿತ್ರದ ಪ್ರಚಾರದಿಂದ ಹೊರಬರುವುದಾಗಿ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದೆ” ಎಂದಿದ್ದಾರೆ. ಸದ್ಯ ಆಕ್ರೋಶದ ಹಿನ್ನೆಲೆಯಲ್ಲಿ ಹಾಡನ್ನು ಡಿಲೀಟ್ ಮಾಡಿರುವುದು ಸಮಾಧಾನಕರ ಸಂಗತಿ ಎಂದು ಅವರು ತಿಳಿಸಿದ್ದಾರೆ.
‘ನನ್ನಂಥ ಕಲಾವಿದರಿಗೆ ಹೆಚ್ಚಿನ ಶಕ್ತಿ ಇರುವುದಿಲ್ಲ. ಇಂಥ ಚಿತ್ರರಂಗದಲ್ಲಿ ನನ್ನ ಅಭಿಪ್ರಾಯವನ್ನು ಯಾರೂ ಕೇಳಲ್ಲ. ವಿರೋಧ ವ್ಯಕ್ತವಾದ ಬಳಿಕ ಹಾಡನ್ನು ಡಿಲೀಟ್ ಮಾಡಿದ್ದಾರೆ ಎಂಬುದು ಸಮಾಧಾನಕರ ಸಂಗತಿ. ನೀವೆಲ್ಲ ವಿರೋಧಿಸಿದಕ್ಕೆ ಧನ್ಯವಾದಗಳು. ಇಂಥ ಹಾಡು ಸರಿಯಲ್ಲ ಎನಿಸಿದರೆ ಅದನ್ನು ತಯಾರಿಸಿದ ಚಿತ್ರತಂಡವನ್ನು ಹೊಣೆಗಾರರನ್ನಾಗಿ ಮಾಡಬೇಕು.
ವಿರೋಧಿಸುವಾಗ ಅವರ ಹೆಸರು ಮತ್ತು ಫೋಟೋವನ್ನೇ ಬಳಸಬೇಕು. ಆಗ ಮಾತ್ರ ಅವರಿಗೆ ಭಯ ಇರುತ್ತದೆ. ಇನ್ಮುಂದೆ ಬಹಳ ಎಚ್ಚರಿಕೆಯಿಂದ ಇರುತ್ತೇನೆ’ ಎಂದು ನೋರಾ ಫತೇಹಿ ಅವರು ಸ್ಪಷ್ಟನೆ ನೀಡಿದ್ದಾರೆ.