ಮುಂಬೈ, ಮೇ 26: ಖ್ಯಾತ ನಟ ರಣವೀರ್ ಸಿಂಗ್ ಅವರ ದಿಢೀರ್ ನಿರ್ಧಾರವೊಂದು ಬಾಲಿವುಡ್ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಬಹುನಿರೀಕ್ಷಿತ ‘ಡಾನ್ 3’ (Don 3) ಸಿನಿಮಾದಿಂದ ಕೊನೆಯ ಕ್ಷಣದಲ್ಲಿ ರಣವೀರ್ ಹೊರನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟವು (FWICE), ನಟನ ವಿರುದ್ಧ ಅತ್ಯಂತ ಕಠಿಣವಾದ ‘ಅಸಹಕಾರ ನಿರ್ದೇಶನ’ ಹೊರಡಿಸುವ ಮೂಲಕ ಚಿತ್ರರಂಗದಿಂದ ತಾತ್ಕಾಲಿಕವಾಗಿ ಬಹಿಷ್ಕರಿಸಿದೆ.
ಒಕ್ಕೂಟದ ಈ ಕಠಿಣ ನಿರ್ಧಾರದಿಂದಾಗಿ ತಾಂತ್ರಿಕ ಸಿಬ್ಬಂದಿ, ಕಾರ್ಮಿಕರು ಸೇರಿದಂತೆ ಚಿತ್ರರಂಗದ ಯಾವುದೇ ನೌಕರರು ರಣವೀರ್ ಸಿಂಗ್ ಅವರ ಮುಂಬರುವ ಸಿನಿಮಾಗಳು ಹಾಗೂ ಜಾಹೀರಾತು ಚಿತ್ರೀಕರಣಗಳಲ್ಲಿ ಭಾಗವಹಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಏನಿದು ವಿವಾದ?
ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಒಡೆತನದ ‘ಎಕ್ಸೆಲ್ ಎಂಟರ್ಟೈನ್ಮೆಂಟ್’ ಸಂಸ್ಥೆಯು ಶಾರುಖ್ ಖಾನ್ ಬದಲಿಗೆ ರಣವೀರ್ ಸಿಂಗ್ ಅವರನ್ನು ನಾಯಕನನ್ನಾಗಿ ನಟಿಸಲು ‘ಡಾನ್ 3’ ಚಿತ್ರವನ್ನು ಘೋಷಿಸಿತ್ತು. ಚಿತ್ರೀಕರಣಕ್ಕೆ ಕೇವಲ ಮೂರು ವಾರಗಳು ಬಾಕಿ ಇರುವಾಗ, ಚಿತ್ರಕಥೆಯಲ್ಲಿ ಬದಲಾವಣೆ ಕೋರಿ ರಣವೀರ್ ಚಿತ್ರದಿಂದ ದಿಢೀರನೆ ಹೊರನಡೆದಿದ್ದಾರೆ ಎಂದು ನಿರ್ಮಾಣ ಸಂಸ್ಥೆ ಒಕ್ಕೂಟಕ್ಕೆ ದೂರು ನೀಡಿತ್ತು. ಪೂರ್ವಸಿದ್ಧತೆಗಾಗಿ ಈಗಾಗಲೇ ₹45 ಕೋಟಿಗೂ ಅಧಿಕ ಹಣ ಖರ್ಚಾಗಿದ್ದು, ನಟನ ನಡವಳಿಕೆಯಿಂದ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಫರ್ಹಾನ್ ಅಖ್ತರ್ ಆರೋಪಿಸಿದ್ದಾರೆ.
ಸೋಮವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಹಾಗೂ ಅಧ್ಯಕ್ಷ ಬಿ.ಎನ್. ತಿವಾರಿ, “ವಿಚಾರಣೆಗೆ ಹಾಜರಾಗುವಂತೆ ರಣವೀರ್ ಸಿಂಗ್ ಅವರಿಗೆ ಸತತ ಮೂರು ಬಾರಿ ನೋಟಿಸ್ ನೀಡಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚಿತ್ರರಂಗ ಎನ್ನುವುದು ಒಂದು ದೊಡ್ಡ ಕುಟುಂಬ. ಕೊನೆಯ ಕ್ಷಣದಲ್ಲಿ ನಟರು ಹೀಗೆ ಚಿತ್ರದಿಂದ ಹೊರನಡೆದರೆ ಸಾವಿರಾರು ದಿನಗೂಲಿ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ. ಯಾವುದೇ ಸೂಪರ್ಸ್ಟಾರ್ ಕೂಡ ನಿಯಮಗಳಿಗಿಂತ ದೊಡ್ಡವರಲ್ಲ. ರಣವೀರ್ ಖುದ್ದಾಗಿ ಬಂದು ಒಕ್ಕೂಟದ ಮುಂದೆ ವಿವರಣೆ ನೀಡುವವರೆಗೂ ಚಿತ್ರರಂಗ ಈ ಬಹಿಷ್ಕಾರವನ್ನು ಮುಂದುವರಿಸಲಿದೆ,” ಎಂದು ಎಚ್ಚರಿಸಿದ್ದಾರೆ.
ಮೌನ ಮುರಿದ ರಣವೀರ್ ಸಿಂಗ್ ತಂಡ
ಒಕ್ಕೂಟದ ನಿರ್ಬಂಧದ ಆದೇಶದ ಬೆನ್ನಲ್ಲೇ ರಣವೀರ್ ಸಿಂಗ್ ಪರ ವಕ್ತಾರರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. “ರಣವೀರ್ ಸಿಂಗ್ ಅವರು ಚಿತ್ರರಂಗ ಹಾಗೂ ‘ಡಾನ್’ ಸರಣಿಯ ಇಡೀ ತಂಡದ ಮೇಲೆ ಅಪಾರ ಗೌರವ ಹೊಂದಿದ್ದಾರೆ. ವೃತ್ತಿಪರ ಭಿನ್ನಾಭಿಪ್ರಾಯಗಳನ್ನು ಗೌರವ ಮತ್ತು ಪ್ರಬುದ್ಧತೆಯಿಂದ ಬಗೆಹರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅವರು ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಚರ್ಚೆ ನಡೆಸದೆ ಮೌನ ಕಾಯ್ದುಕೊಂಡಿದ್ದಾರೆ. ಸದ್ಯ ಅವರು ತಮ್ಮ ಮುಂದಿನ ಸಿನಿಮಾಗಳ ಕಮಿಟ್ಮೆಂಟ್ಗಳ ಕಡೆಗೆ ಗಮನ ಹರಿಸಲಿದ್ದಾರೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಇಂಡಸ್ಟ್ರಿಗೆ ಶಾಕ್: ಸದ್ಯ ‘ಧುರಂಧರ್’ ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿರುವ ರಣವೀರ್ ಸಿಂಗ್ ವಿರುದ್ಧ ಚಿತ್ರರಂಗದ ಇತಿಹಾಸದಲ್ಲೇ ಇಂತಹ ಕಠಿಣ ಕ್ರಮ ಕೈಗೊಂಡಿರುವುದು ಇಡೀ ಬಾಲಿವುಡ್ ವಲಯವನ್ನು ದಂಗಾಗಿಸಿದೆ. ನಿರ್ಮಾಪಕರ ಮಂಡಳಿಗಳು ಒಕ್ಕೂಟದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದು, ಈ ಬಿಕ್ಕಟ್ಟು ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.