ನವದೆಹಲಿ ಜುಲೈ 03: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಸುಪ್ರೀಂಕೋರ್ಟ್ನಲ್ಲಿ ಮತ್ತೊಂದು ತೀವ್ರ ಹಿನ್ನಡೆಯಾಗಿದೆ. “ಒಂದು ವರ್ಷದವರೆಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಾರದು” ಎಂಬ ಕೋರ್ಟ್ನ ಈ ಹಿಂದಿನ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ನ ರಿಜಿಸ್ಟ್ರಾರ್ ಅವರು ವಜಾಗೊಳಿಸಿದ್ದಾರೆ.

ಈ ಅರ್ಜಿ ವಿಚಾರಣೆಗೆ ಅರ್ಹವಲ್ಲದ ಕಾರಣ, ಇದನ್ನು ನ್ಯಾಯಪೀಠದ ಮುಂದೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ರಿಜಿಸ್ಟ್ರಾರ್ ಅವರು ದರ್ಶನ್ ಪರ ವಕೀಲರಿಗೆ ಲಿಖಿತ ಮಾಹಿತಿ ನೀಡಿದ್ದಾರೆ.
ಕಳೆದ ಮೇ 16ರಂದು ದರ್ಶನ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಕಠಿಣ ಷರತ್ತನ್ನು ವಿಧಿಸಿ ಜಾಮೀನು ನಿರಾಕರಿಸಿತ್ತು. ಅಲ್ಲದೆ, “ಮುಂದಿನ ಒಂದು ವರ್ಷದವರೆಗೆ ಯಾವುದೇ ಕಾರಣಕ್ಕೂ ಜಾಮೀನು ಕೋರಿ ಅರ್ಜಿ ಸಲ್ಲಿಸಬಾರದು” ಎಂದು ಆದೇಶಿಸಿತ್ತು. ಈ ಕಠಿಣ ಆದೇಶಕ್ಕೆ ತಿದ್ದುಪಡಿ ತರಬೇಕು ಮತ್ತು ಯಾವುದೇ ತುರ್ತು ಆರೋಗ್ಯ ಪರಿಸ್ಥಿತಿಗಳು ಎದುರಾದರೆ ಮಧ್ಯಂತರ ಜಾಮೀನು ಕೋರಲು ತಮಗೆ ಅವಕಾಶ ನೀಡಬೇಕು ಎಂದು ದರ್ಶನ್ ಸುಪ್ರೀಂಕೋರ್ಟ್ಗೆ ಮರು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಗೆ ಈಗ ರಿಜಿಸ್ಟ್ರಾರ್ ಮಟ್ಟದಲ್ಲೇ ಆಕ್ಷೇಪ ವ್ಯಕ್ತವಾಗಿ, ತಾಂತ್ರಿಕವಾಗಿ ವಜಾಗೊಂಡಿದೆ.
ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ವರದಿಯ ಪ್ರಕಾರ, 2025ರ ಆಗಸ್ಟ್ 14ರಂದೇ ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನನ್ನು ನ್ಯಾಯಪೀಠ ರದ್ದುಗೊಳಿಸಿತ್ತು. ತದನಂತರ 2025ರ ನವೆಂಬರ್ 3ರಂದು ದೋಷಾರೋಪಗಳನ್ನು (Charges) ಪಟ್ಟಿ ಮಾಡಲಾಗಿತ್ತು. ಇಡೀ ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದು, ಪ್ರಾಸಿಕ್ಯೂಷನ್ 150 ಸಾಕ್ಷಿಗಳ ವಿಚಾರಣೆ ನಡೆಸಲು ಒಲವು ತೋರಿದೆ. ಆದರೆ, ಕಳೆದ ಏಳು ತಿಂಗಳಲ್ಲಿ ಕೇವಲ 10 ಪ್ರಮುಖ ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಇನ್ನೂ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಬಾಕಿ ಉಳಿದಿದೆ.
ಇದೇ ವೇಗದಲ್ಲಿ ಹೋದರೆ ವಿಚಾರಣೆ ಮುಗಿಯಲು ದೀರ್ಘ ಕಾಲ ಹಿಡಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂಕೋರ್ಟ್, ಅಧೀನ ನ್ಯಾಯಾಲಯವು ದಿನನಿತ್ಯ (Day-to-Day Trial) ವಿಚಾರಣೆ ನಡೆಸಿ ಒಂದು ವರ್ಷದೊಳಗೆ ಇದನ್ನು ಪೂರ್ಣಗೊಳಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ತ್ವರಿತ ವಿಚಾರಣೆಗೆ ಪ್ರತಿವಾದಿಗಳು ಸಹಕರಿಸಬೇಕು, ಒಂದು ವರ್ಷ ಮುಗಿಯುವ ಮುನ್ನ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿತ್ತು. ಇದೀಗ ರಿಜಿಸ್ಟ್ರಾರ್ ಅವರ ಈ ಕಠಿಣ ನಡೆಯಿಂದಾಗಿ ನಟ ದರ್ಶನ್ ಕನಿಷ್ಠ ಒಂದು ವರ್ಷದ ಅವಧಿಗೆ ಜೈಲಿನಲ್ಲೇ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.