ಮಾಲ್ಡೀವ್ಸ್ ಮಾರ್ಚ್. 22: ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್ನಲ್ಲಿ ಸಂಭವಿಸಿದ ಭೀಕರ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಗಾಯಗೊಂಡಿದ್ದಾರೆ. ಇದೇ ಘಟನೆಯಲ್ಲಿ ಭಾರತದ ಖ್ಯಾತ ರ್ಯಾಲಿ ಚಾಲಕ ಹರಿ ಸಿಂಗ್ ಸೇರಿದಂತೆ ಇಬ್ಬರು ಭಾರತೀಯರು ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

ಶುಕ್ರವಾರ ಮುಂಜಾನೆ ಮಾಲ್ಡೀವ್ಸ್ನ ‘ವಿ ಫೆಲಿಧೂ’ ಪ್ರದೇಶದ ಸಮೀಪ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್ ಬೋಟ್ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿ ಬಿದ್ದಿದೆ. ಅಪಘಾತದ ಸಮಯದಲ್ಲಿ ದೋಣಿಯಲ್ಲಿ ಐವರು ಭಾರತೀಯ ಪುರುಷರು ಹಾಗೂ ಯುನೈಟೆಡ್ ಕಿಂಗ್ಡಮ್ ಮತ್ತು ರಷ್ಯಾದ ತಲಾ ಓರ್ವ ಮಹಿಳೆ ಸೇರಿದಂತೆ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗೌತಮ್ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ರಕ್ಷಿಸಿ ಏರ್ ಲಿಫ್ಟ್ ಮೂಲಕ ಮುಂಬೈಗೆ ರವಾನಿಸಲಾಗಿದೆ. “ಗೌತಮ್ ಸಿಂಘಾನಿಯಾ ಅವರು ಸದ್ಯ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನಿಮ್ಮೆಲ್ಲರ ಹಾರೈಕೆಗಳಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ,” ಎಂದು ಅವರ ವಕ್ತಾರರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ ನೀಡಿರುವ ಮಾಹಿತಿಯ ಪ್ರಕಾರ, ದೋಣಿ ಮಗುಚಿದ ಪರಿಣಾಮ ರಷ್ಯಾದ ಮಹಿಳೆ ಸೇರಿದಂತೆ ಐವರು ಸಮುದ್ರಕ್ಕೆ ಬಿದ್ದಿದ್ದರು. ಇವರಲ್ಲಿ ಮೂವರನ್ನು ರಕ್ಷಿಸಲಾಗಿದೆಯಾದರೂ, ಭಾರತದ ಖ್ಯಾತ ಮೋಟಾರ್ ಸ್ಪೋರ್ಟ್ಸ್ ಪಟು ಹರಿ ಸಿಂಗ್ ಮತ್ತು ಅವರ ಮತ್ತೊಬ್ಬ ಸ್ನೇಹಿತ ಇನ್ನೂ ಪತ್ತೆಯಾಗಿಲ್ಲ.
ಸದ್ಯ ಘಟನಾ ಸ್ಥಳದಲ್ಲಿ ಸಮುದ್ರದ ಅಲೆಗಳು ಅತ್ಯಂತ ಪ್ರಕ್ಷುಬ್ಧವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಭಾರಿ ಅಡ್ಡಿಯುಂಟಾಗಿದೆ. ಸ್ಥಳೀಯ ಪೊಲೀಸರು ಹಾಗೂ ನೌಕಾಪಡೆಯ ರಕ್ಷಣಾ ತಂಡಗಳು ಹೆಲಿಕಾಪ್ಟರ್ ಮತ್ತು ಮುಳುಗು ತಜ್ಞರ ಮೂಲಕ ವಿಸ್ತೃತ ಶೋಧ ಕಾರ್ಯವನ್ನು ಮುಂದುವರಿಸಿವೆ.