ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದ ಮಂಗಳೂರು ಕರ್ನಾಟಕ ಗೃಹ ಮಂಡಳಿ ನಿಗಮದ ಅಧಿಕಾರಿ

ಮಂಗಳೂರು ಸೆಪ್ಟೆಂಬರ್ 28: ಸಾಲ ಮರುಪಾವತಿಯ ನಿರಪೇಕ್ಷಣಾ ಪತ್ರಕ್ಕಾಗಿ ಲಂಚ ಸ್ವೀಕರಿಸುತ್ತಿದ್ದ ಕರ್ನಾಟಕ ಗೃಹ ಮಂಡಳಿ ನಿಗಮದ ಸಿಬ್ಬಂದಿಯೊಬ್ಬನನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದು ಮತ್ತೊಬ್ಬ ಸಿಬ್ಬಂದಿ ಪರಾರಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಮಂಗಳೂರು ಕರ್ನಾಟಕ ಗೃಹ ಮಂಡಳಿ ನಿಗಮದ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಕಾರ್ಯಪಾಲಕ ಅಭಿಯಂತರಾದ ವಿಜಯ್ ಕುಮಾರ್ ಪರಾರಿಯಾಗಿದ್ದಾರೆ.

ಆರೋಪಿಗಳು ಬಜ್ಪೆ ನಿವಾಸಿ ಗಂಗಾಧರ.ಕೆ ಅವರಿಂದ ಕರ್ನಾಟಕ ಗೃಹ ಮಂಡಳಿಯ ಸಾಲ ಮರುಪಾವತಿಯಾದ ಬಳಿಕ ನೀಡಿದ ಮೂಲ ದಾಖಲೆಗಳನ್ನು ಹಿಂದಿರಿಗಿಸಲು ಮತ್ತು ನಿರಕ್ಷೇಪಣಾ ಪತ್ರವನ್ನು ಒದಗಿಸಲು 20,000 ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು.

ಈ ನಡುವೆ ಮಾತುಕತೆ ನಡೆಸಿ ಅಧಿಕಾರಿಗಳಿಬ್ಬರು 12,000 ಕ್ಕೆ ಒಪ್ಪಿಕೊಂಡು ಸ್ಥಳದಲ್ಲೇ 2,000 ಹಣ ಪಡೆದಿದ್ದರು. ಉಳಿದ 10,000 ಹಣವನ್ನು ನಾಳೆ ನೀಡುವುದಾಗಿ ಹೇಳಿದ ಗಂಗಾಧರ ಅವರು ನೇರ ಭ್ರಷ್ಟಾಚಾರ ನಿಗ್ರಹ ದಳ ಕಛೇರಿಗೆ ಹೋಗಿ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಇಂದು ಗಂಗಾಧರ ಅವರೊಂದಿಗೆ ಮಂಗಳೂರಿನ ಕಾವೂರಿನಲ್ಲಿರುವ ಕರ್ನಾಟಕ ಗೃಹ ಮಂಡಳಿ ನಿಗಮದ ಕಛೇರಿಗೆ ಲಂಚದ ಹಣ ಹಿಡಿದುಕೊಂಡು ಹೋದಾಗ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರರು ವಿಜಯ ಕುಮಾರ್ ಕಛೇರಿಯಲ್ಲಿ ಇರದೆ ಹೊರಗಡೆ ಹೋಗಿದ್ದರು ಕಛೇರಿಯಲ್ಲಿ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿ ಇದ್ದು ಅವರು ಲಂಚದ ಹಣ ಪಡೆಯುತ್ತಿದ್ದಾಗ ಸಂದರ್ಭ ದಕ್ಷಿಣ ಕನ್ನಡ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.

ದಾಳಿಯ ಬಗ್ಗೆ ಮಾಹಿತಿ ಪಡೆದ ಮತ್ತೊಬ್ಬ ಆರೋಪಿ ವಿಜಯ ಕುಮಾರ್ ಪರಾರಿಯಾಗಿದ್ದಾರೆ.

Facebook Comments

comments