ದೇವನಹಳ್ಳಿ, ನವೆಂಬರ್ 18: ಕೆಐಎಬಿಯಲ್ಲಿ ಸೈಡ್ ಪಿಕಪ್ ವಿಚಾರಕ್ಕೆ ಚಾಲಕರ ಮಧ್ಯೆ ಗಲಾಟೆ ನಡೆದಿದೆ. ಮಧ್ಯರಾತ್ರಿ ಸಾರ್ವಜನಿಕರ ಮಧ್ಯೆಯೇ ಓರ್ವ ಕ್ಯಾಬ್ ಚಾಲಕ, ಮತ್ತೊಬ್ಬ ಚಾಲಕನನ್ನು ಅಟ್ಟಾಡಿಸಿ ಲಾಂಗ್‌ನಿಂದ ಹಲ್ಲೆಗೆ ಯತ್ನಸಿರುವಂತಹ ಘಟನೆ ನಡೆದಿದೆ. ಲಾಂಗ್ ಹಿಡಿದು ಹಲ್ಲೆ ಮಾಡಲು ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ಸಾರ್ವಜನಿಕರ ಸ್ಥಳದಲ್ಲೇ ಕೈಯಲ್ಲಿ ಲಾಂಗ್ ಹಿಡಿದು ಸಹ ಚಾಲಕನನ್ನ ಅಟ್ಟಾಡಿಸಿ ಕೊನೆಗೆ ಏರ್ಪೋಟ್ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿರುವನ ಹೆಸರು ಸುಹೇಲ್. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ತಡರಾತ್ರಿ ಪ್ರಯಾಣಿಕರನ್ನ ಸೈಡ್ ಪಿಕ ಅಪ್ ಮಾಡುವುದಕ್ಕೆ ಅಂತ ಬಂದಿದ್ದು, ಸುಹೇಲ್ ಮತ್ತು ಜಗದೀಶ್ ಎನ್ನುವ ಚಾಲಕರು ಪ್ರಯಾಣಿಕರನ್ನ ತಮ್ಮ ಕ್ಯಾಬ್ ಗಳತ್ತ ಸೆಳೆಯಲು ಮುಂದಾಗಿದ್ದಾರೆ. ಜೊತೆಗೆ ಇಬ್ಬರು ಒಬ್ಬರ ಪ್ಯಾಸೆಂಜರ್ನ ಬ್ಯಾಗ್ ಹಿಡಿದುಕೊಂಡು ಕಿತ್ತಾಡಿದ್ದು, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಇನ್ನು ಇಬ್ಬರು ಹೊಡೆದಾಡಿಕೊಳ್ಳುತ್ತಿದ್ದಂತೆ ಏರ್ಪೋಟ್ನಲ್ಲಿದ್ದ ಭದ್ರತಾ ಪಡೆ ಸಿಬ್ಬಂದಿ ಇಬ್ಬರ ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಸುಹೇಲ್ ಮತ್ತೆ ತಡರಾತ್ರಿ ಏರ್ಪೋಟ್ಗೆ ಬಂದು ಲಾಂಗ್ನಂತಹ ಉದ್ದದ ಚಾಕು ಕೈಯಲ್ಲಿ ಹಿಡಿದುಕೊಂಡು ಜಗದೀಶ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಸುಹೇಲ್ ಕೈ ನಲ್ಲಿ ಚಾಕು ಕಂಡ ಜಗದೀಶ್ ತಪ್ಪಿಸಿಕೊಳ್ಳಲು ಪಾರ್ಕಿಂಗ್ ಏರಿಯಾ ಕಡೆ ಓಡಿದ್ದು, ಟರ್ಮಿನಲ್ನಲ್ಲಿ ಜನರ ನಡುವೆಯೇ ಅಟ್ಟಾಡಿಸಿ ಹಲ್ಲೆ ಮಾಡಲು ಮುಂದಾಗಿರುವುದನ್ನು ಕಂಡ ಪ್ರಯಾಣಿಕರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.
ರಾತ್ರಿ ವಿಮಾನಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಏರ್ಪೋಟ್ನಲ್ಲಿ ಪ್ರಯಾಣಿಕರು ಸಹ ಅಧಿಕವಾಗಿದ್ದು, ಲಾಂಗ್ ಹಿಡಿದು ಹಲ್ಲೆ ಮಾಡಲು ಮುಂದಾಗಿದ್ದನ್ನ ಕಂಡ ಪ್ರಯಾಣಿಕರು ಕಿರುಚಾಡಿದ್ದಾರೆ. ಪ್ರಯಾಣಿಕರ ಕಿರುಚಾಟ ಕೇಳ್ತಿದ್ದಂತೆ ಎಚ್ಚೆತ್ತ ಏರ್ಪೋಟ್ ಭದ್ರತಾ ಪಡೆ ಸಿಬ್ಬಂದಿ, ಲಾಂಗ್ ಹಿಡಿದು ಅಟ್ಟಾಡಿಸುತ್ತಿದ್ದ ಸುಹೇಲ್ ನನ್ನ ವಶಕ್ಕೆ ಪಡೆದು ಲಾಂಗ್ ಕಿತ್ತುಕೊಂಡಿದ್ದಾರೆ.
ಇತ್ತೀಚೆಗೆ ಏರ್ಪೋಟ್ನಲ್ಲಿ ಸೈಡ್ ಪಿಕ್ ಅಪ್ ಚಾಲಕರ ಹಾವಳಿ ಹೆಚ್ಚಾಗಿದ್ದು, ಹಲವು ಭಾರಿ ಗಲಾಟೆಗಳನ್ನ ಮಾಡಿಕೊಂಡಿದ್ದು, ಅವರನ್ನ ಭದ್ರತಾ ಪಡೆ ಸಿಬ್ಬಂದಿ ಸ್ಥಳಿಯ ಪೊಲೀಸರ ವಶಕ್ಕೆ ನೀಡಿದ್ದರು. ಆದರೆ ಸ್ಥಳಿಯ ಏರ್ಪೋಟ್ ಪೊಲೀಸರ ನಿರ್ಲಕ್ಷ್ಯದಿಂದ ಮತ್ತೆ ಮತ್ತೆ ಸೈಡ್ ಪಿಕ್ ಅಪ್ ಚಾಲಕರು ಏರ್ಪೋಟ್ಗೆ ಲಾಂಗ್ ತಂದು ಅಟ್ಟಹಾಸ ಮೆರೆಯುತ್ತಿದ್ದಾರೆ. ಚಾಲಕರ ಈ ವರ್ತನೆ ಕಂಡು ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.



