Connect with us

LATEST NEWS

ಮದುವೆ ಮಂಟಪವಾಗಿ ಬದಲಾದ ಜೈಲು…!

ಒರಿಸ್ಸಾ, ಫೆಬ್ರವರಿ 27: ಒರಿಸ್ಸಾದ ಜೈಲೊಂದು ಮದುವೆ ಮಂಟಪವಾಗಿ ಬದಲಾದ ವಿಶೇಷ ಪ್ರಸಂಗವಿದು. ಜೈಲುಗಳು ಶಿಕ್ಷೆ ನೀಡಲಷ್ಟೇ ಅಲ್ಲ, ಅಪರಾಧಿಗಳು ಸುಧಾರಿಸಿಕೊಳ್ಳಲೂ ಅವಕಾಶ ನೀಡುತ್ತವೆ ಎನ್ನುವುದಕ್ಕೆ ಉದಾಹರಣೆ ಕೂಡ ಆಗಿದೆ.  ಒರಿಸ್ಸಾದ ಚೌಡ್ವಾರ್ ಸರ್ಕಲ್ ಜೈಲಿನಲ್ಲಿ ಜೈಲು ಅಧಿಕಾರಿಗಳು ಮತ್ತು ಇತರ ಖೈದಿಗಳ ಸಮ್ಮುಖದಲ್ಲಿ ವಿಚಾರಣಾಧೀನ ಖೈದಿಯೊಬ್ಬ ತಾನು ಅತ್ಯಾಚಾರವೆಸಗಿದ್ದ ಯುವತಿಯೊಂದಿಗೆ ನವಜೀವನ ಆರಂಭಿಸಿದ್ದಾನೆ.ಕಟಕ್ ಜಿಲ್ಲೆಯ ಗುರುಡಿಜಾಟಿಯಾ ನಿವಾಸಿ ರಾಜೇಶ್ ಸಿಂಗ್ (23) ಕಳೆದ ವರ್ಷ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧಿಯಾಗಿದ್ದ. ಪೋಕ್ಸೊ ಕೋರ್ಟ್​ನಲ್ಲಿ ಅವನ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ಚೌಡ್ವಾರ್ ಸರ್ಕಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅತ್ತ ಅತ್ಯಾಚಾರದ ಫಲವಾಗಿ ಯುವತಿಯು ಗರ್ಭಿಣಿಯಾಗಿದ್ದು, ಗಂಡು ಮಗುವಿನ ತಾಯಿಯಾಗಿದ್ದಾಳೆ.

ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಆರೋಪಿಯು ಸಂತ್ರಸ್ತ ಯುವತಿಯನ್ನು ಮದುವೆಯಾದರೆ ಮಾತ್ರ ಜಾಮೀನಿನ ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿದ್ದರು ಎನ್ನಲಾಗಿದೆ. ಯುವತಿಗೆ ಕಳೆದ ತಿಂಗಳು 18 ವರ್ಷ ತುಂಬಿದ್ದರಿಂದ ನ್ಯಾಯಾಲಯದ ಆದೇಶದ ಮೇರೆಗೆ ಮತ್ತು ಜೈಲು ಅಧಿಕಾರಿಗಳ ಅನುಮತಿ ಪಡೆದು ಅವರಿಬ್ಬರ ವಿವಾಹವನ್ನು ಗುರುವಾರ ಫೆಬ್ರವರಿ 25ರಂದು ಆಯೋಜಿಸಲಾಗಿದೆ.

Indian wedding hands with gold

ಜೈಲು ಅಧಿಕಾರಿಗಳು ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದರ ಸಹಾಯದೊಂದಿಗೆ ಜೈಲು ಆವರಣದೊಳಗೆ ಮದುವೆಯ ಸಿದ್ಧತೆಗಳನ್ನು ನಡೆಸಿದ್ದಾರೆ. ಆರೋಪಿ ಮತ್ತು ಸಂತ್ರಸ್ತೆ ಈರ್ವರ ಕುಟುಂಬದವರು, ಮಿತ್ರರು ಮತ್ತು ಪೋಕ್ಸೊ ಕೋರ್ಟ್​ನ ವಕೀಲರ ಎದುರಿಗೆ ರಾಜೇಶ್ ಸಿಂಗ್, ಯುವತಿಯೊಂದಿಗೆ ಹೂಮಾಲೆ ಬದಲಿಸಿಕೊಂಡು ವಿವಾಹವಾಗಿದ್ದಾನೆ.

ನಂತರ ವಿವಾಹದ ಆರತಕ್ಷತೆ ಸಹ ನಡೆದಿದ್ದು, ಇದರಲ್ಲಿ ಇತರ ಖೈದಿಗಳು ಭಾಗವಹಿಸಿದ್ದರು ಎನ್ನಲಾಗಿದೆ.ವಿವಾಹ ಸಮಾರಂಭದ ನಂತರ ವಧು ತನ್ನ ಅತ್ತೆಯ ಮನೆಗೆ ಹೋಗಿದ್ದಾಳೆ. ಆದರೆ ಸಿಂಗ್​ನ ಜಾಮೀನು ಅರ್ಜಿಯು ಮುಂದಿನ ತಿಂಗಳು ವಿಚಾರಣೆಗೆ ಬರಲಿದ್ದು, ಸದ್ಯಕ್ಕೆ ಆತ ಜೈಲಿನಲ್ಲಿಯೇ ಇದ್ದಾನೆ ಎಂದು ಜೈಲು ಅಧಿಕಾರಿ ಕುಲಮನಿ ಬೆಹೆರ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *