ಮಂಗಳೂರು ಮೇ 30: ಅರುವತ್ತಕ್ಕೆ ಅರಳು-ಮರಳು, ನಿವೃತ್ತಿ ಜೀವನ ಎನ್ನುವ ಲೆಕ್ಕಾಚಾರವೇ ಬಹುತೇಕರದ್ದು.60 ವರ್ಷಕ್ಕೆ ಬದುಕಿನ ಬಹುತೇಕ ಭಾಗ ಮುಗಿದು ಹೋಯಿತು ಎನ್ನುವ ಭಾವನೆ ಬರದವರು ಅತೀ ವಿರಳ. ಆದರೆ ಮಂಗಳೂರಿನ ಉದ್ಯಮಿ ಹಾಗೂ ಬೈಕ್ ಸಾಹಸಿ ಶರತ್ ಕುಮಾರ್ ಎಕ್ಕೂರು ಅವರಿಗೆ ತುಂಬಿದ ಅರುವತ್ತು ವರ್ಷ ಅವರ ಮತ್ತೊಂದು ಕನಸಿನ ಆರಂಭದಂತಾಗಿದೆ. ಜೀವನದ ಅರವತ್ತನೇ ವರ್ಷದ ನೆನಪಿಗಾಗಿ ಅವರು ಕೈಗೊಂಡಿರುವ ಸಾಹಸ ಸಾಮಾನ್ಯದ್ದಲ್ಲ.ವಿಶ್ವದ ಸುಮಾರು 38 ದೇಶಗಳನ್ನು ತಮ್ಮ ರಾಯಲ್ ಎನ್ಫೀಲ್ಡ್ ಸೂಪರ್ ಮೆಟಿಯೊರ್ 650 ಬೈಕ್ನಲ್ಲಿ ಸುತ್ತುವ ಮೂಲಕ ಜಗತ್ತಿನ ರಸ್ತೆಗಳಲ್ಲಿ ತಮ್ಮ ಕನಸನ್ನು ಸಾಕಾರಗೊಳಿಸಲು ಹೊರಟಿದ್ದಾರೆ….
ಶರತ್ ಎಕ್ಕೂರು ಅವರ ಕನಸಿಗೆ ಮೇ 31ರಂದು ಬೆಳಗ್ಗೆ ಮಂಗಳೂರಿನ ಶಾಂತಿ ಕೆಥೆಡ್ರಲ್ ಚರ್ಚ್ ಬಳಿಯಿಂದ ಚಾಲನೆ ದೊರೆಯಲಿದೆ. ಈ ಜಾಗತಿಕ ಬೈಕ್ ಯಾತ್ರೆ ಸುಮಾರು ಐದರಿಂದ ಆರು ತಿಂಗಳವರೆಗೆ ಮುಂದುವರಿಯಲಿದೆ. ಒಟ್ಟು 35 ರಿಂದ 45 ಸಾವಿರ ಕಿಲೋಮೀಟರ್ಗಳಷ್ಟು ದೂರವನ್ನು ಶರತ್ ಎಕ್ಕೂರು ಬೈಕ್ನಲ್ಲೇ ಕ್ರಮಿಸಲಿದ್ದಾರೆ.
ಇದು ಶರತ್ ಅವರ ಮೊದಲ ಅಂತಾರಾಷ್ಟ್ರೀಯ ಬೈಕ್ ಯಾತ್ರೆಯಲ್ಲ. ಸುಮಾರು ಒಂದು ವರ್ಷ ಹಿಂದೆ ಅವರು ಗಲ್ಫ್ ರಾಷ್ಟ್ರಗಳ ಆರು ದೇಶಗಳಿಗೆ ಬೈಕ್ನಲ್ಲಿ ಪ್ರವಾಸ ಕೈಗೊಂಡಿದ್ದರು. ಮಸ್ಕಟ್, ದುಬೈ, ಬಹ್ರೇನ್, ಕತಾರ್, ಕುವೈತ್ ಹಾಗೂ ಸೌದಿ ಅರೇಬಿಯಾ ದೇಶಗಳಲ್ಲಿ ನಡೆದ ಆ ಸಾಹಸಯಾತ್ರೆ ಅವರಿಗೆ ಅಪಾರ ಆತ್ಮವಿಶ್ವಾಸ ನೀಡಿತ್ತು. ‘ಆ ಟೂರ್ ಭಾರಿ ಯಶಸ್ವಿಯಾಗಿತ್ತು. ಅದೇ ಈ ಬಹುದೂರದ ಪ್ರಯಾಣಕ್ಕೆ ಸ್ಪೂರ್ತಿ ನೀಡಿತು,’ ಎನ್ನುತಾರೆ ಶರತ್..
ಈ ಬಾರಿ ಶರತ್ ಯಾತ್ರೆ ಇನ್ನಷ್ಟು ವಿಶಾಲವಾಗಿದೆ. ಮಂಗಳೂರಿನಿಂದ ಬೆಂಗಳೂರು, ಹೈದರಾಬಾದ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಮಾರ್ಗವಾಗಿ ನೇಪಾಳ ಪ್ರವೇಶಿಸುವ ಅವರು ಅಲ್ಲಿಂದ ಟಿಬೆಟ್ ಹಾಗೂ ಚೀನಾ ಮೂಲಕ ಮಧ್ಯ ಏಷ್ಯಾದತ್ತ ಸಾಗಲಿದ್ದಾರೆ. ಬಳಿಕ ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮೂಲಕ ರಷ್ಯಾ ತಲುಪಲಿದ್ದಾರೆ. ರಷ್ಯಾದಲ್ಲಿ ಕೆಲ ದಿನಗಳ ತಂಗುವಿಕೆಯ ನಂತರ ಜುಲೈ 22ರಂದು ಲಾತ್ವಿಯಾ ಮೂಲಕ ಯುರೋಪ್ ಪ್ರವೇಶಿಸಲಿದ್ದಾರೆ.
ಯುರೋಪಿನ ಸುಮಾರು 29 ರಾಷ್ಟ್ರಗಳಲ್ಲಿ ಬೈಕ್ ಯಾತ್ರೆ ನಡೆಸಲು ಅವರು ಯೋಜನೆ ರೂಪಿಸಿದ್ದಾರೆ. ಪೋಲೆಂಡ್, ಜರ್ಮನಿ, ಫ್ರಾನ್ಸ್, ಇಟಲಿ, ಸ್ವಿಟ್ಜರ್ಲ್ಯಾಂಡ್, ಹಂಗೇರಿ, ಬೆಲ್ಜಿಯಂ ಸೇರಿದಂತೆ ಹಲವು ರಾಷ್ಟ್ರಗಳನ್ನು ಸುತ್ತಲಿರುವ ಅವರು, ಯುರೋಪ್ ಭಾಗಕ್ಕೆ ಮಾತ್ರವೇ ಎರಡು ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.
ಯುರೋಪ್ ಪ್ರವಾಸದ ಬಳಿಕ ಅವರು ಮತ್ತೆ ಟರ್ಕಿಗೆ ಪ್ರವೇಶಿಸಿ ಅಲ್ಲಿಂದ ಇರಾಕ್ ಮತ್ತು ಇರಾನ್ ಕಡೆಗೆ ಸಾಗಲಿದ್ದಾರೆ. ನಂತರ ಮತ್ತೊಮ್ಮೆ ಟರ್ಕಿ ಮೂಲಕ ಕುವೈತ್, ಸೌದಿ ಅರೇಬಿಯಾ, ಬಹ್ರೇನ್, ಕತಾರ್, ದುಬೈ ಮಾರ್ಗವಾಗಿ ಓಮನ್ನಲ್ಲಿ ತಮ್ಮ ಜಾಗತಿಕ ಬೈಕ್ ಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ. ಓಮನ್ನಿಂದ ಬೈಕ್ನ್ನು ಹಡಗಿನಲ್ಲಿ ಭಾರತಕ್ಕೆ ಕಳುಹಿಸಿ, ತಾವು ವಿಮಾನದಲ್ಲಿ ಹಿಂದಿರುಗಲಿದ್ದಾರೆ.
ಶರತ್ ಎಕ್ಕೂರಿಗೆ ಬೈಕ್ ಎಂದರೆ ಪಂಚಪ್ರಾಣ. ಅಲ್ಲದೆ ದಸರಾ ಮತ್ತು ಕ್ರಿಸ್ಮಸ್ ಸಮಯದಲ್ಲಿ ಅವರ ಬೈಕ್ ದೀಪಾಲಂಕಾರಗಳಿಂದ ಕಂಗೊಳಿಸುತ್ತದೆ. ಜಗಮಗಿಸುವ ದೀಪಗಳನ್ನು ತನ್ನ ಬೈಕ್ ಗೆ ಅಳವಡಿಸಿ ಹಬ್ಬವನ್ನು ಕೊಂಚ ವಿಭಿನ್ನವಾಗಿ ಆಚರಿಸುವ ಶರತ್ ಪರಿಸರದ ನಿವಾಸಿಗಳಿಗೆಲ್ಲಾ ಅಚ್ಚುಮೆಚ್ಚು. ಈ ಕಾರಣಕ್ಕಾಗಿಯೇ ಶರತ್ ಬೈಕ್ ರಾಲಿ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಪಡೆದು ಶರತ್ ಅವರಿಗೆ ಶುಭ ಹಾರೈಸುತ್ತಿದ್ದಾರೆ. ಈ ಹಿಂದಿನ ಬೈಕ್ ರಾಲಿಯ ಉದ್ದೇಶ ಡ್ರಗ್ಸ್ ವಿರುದ್ಧದ ಜಾಗೃತಿಯಾಗಿದ್ದರೆ, ಈ ಬಾರಿಯ ಉದ್ಧೇಶ ತನಗೆ 60 ವರ್ಷ ತುಂಬಿದ ಸಂಭ್ರಮವಾಗಿದೆ ಎನ್ನುತ್ತಾರೆ ಶರತ್ ..
60 ರ ಪ್ರಾಯದಲ್ಲೂ ಶರತ್ ಅವರಲ್ಲಿನ ಉತ್ಸಾಹ ಎಲ್ಲರಿಗೂ ಮಾದರಿಯಂತಿದೆ. ಛಲ ಮತ್ತು ಆತ್ಮವಿಶ್ವಾಸವಿದ್ದಲ್ಲಿ ಯಾವ ಕೆಲಸ ಮಾಡಲೂ ವಯಸ್ಸು ಅಡೆತಡೆಯಾಗಲ್ಲ ಅನ್ನೋತಕ್ಕೆ ಶರತ್ ಒಂದು ಸೂಕ್ತ ಉದಾಹರಣೆಯೂ ಆಗಿದ್ದಾರೆ.