ಶಿವಮೊಗ್ಗ, ಮಾರ್ಚ್ 18: ಜಮೀನು ವಿವಾದದ ಹಿನ್ನೆಲೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಆರೋಪಿಗಳಾದ ಕುಮಾರ್ (57) ಹಾಗೂ ಅವರ ಮಗ ಕಾರ್ತಿಕ್(28) ಎಂಬುವರಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 57 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಶಿವಮೊಗ್ಗ ತಾಲೂಕಿನ ಬೆಳಲಕಟ್ಟೆ ಗ್ರಾಮದ ನಿವಾಸಿ ಮಹೇಶಪ್ಪ ಎಂಬುವವರೇ ಕೊಲೆಯಾದ ದುರ್ದೈವಿ. ಜಮೀನು ವಿಚಾರವಾಗಿ ಮಹೇಶಪ್ಪ ಹಾಗೂ ಆರೋಪಿಗಳಾದ ಕುಮಾರ್ (57) ಮತ್ತು ಕಾರ್ತಿಕ್ (28) ನಡುವೆ ದೀರ್ಘಕಾಲದ ದ್ವೇಷವಿತ್ತು. ಇದೇ ಕಾರಣಕ್ಕೆ ಇವರ ನಡುವೆ ಪದೇಪದೇ ಗಲಾಟೆಗಳು ನಡೆಯುತ್ತಿದ್ದವು.
ದೋಷಾರೋಪಣ ಪಟ್ಟಿಯ ಅನ್ವಯ, ದಿನಾಂಕ 03-12-2023ರಂದು ಮಹೇಶಪ್ಪ ಅವರು ಸ್ಕೂಟಿಯಲ್ಲಿ ಬರುತ್ತಿದ್ದಾಗ, ಹನಸವಾಡಿ ಸರ್ಕಲ್ ಬಳಿ ಆರೋಪಿಗಳಾದ ಕುಮಾರ್ ಮತ್ತು ಕಾರ್ತಿಕ್ ಹೊಂಚು ಹಾಕಿ ಕುಳಿತಿದ್ದರು. ಮಹೇಶಪ್ಪ ಅವರು ಸ್ಥಳಕ್ಕೆ ತಲುಪುತ್ತಿದ್ದಂತೆ ಅವರನ್ನು ಅಡ್ಡಗಟ್ಟಿದ ಆರೋಪಿಗಳು, ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ತೀವ್ರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಹೇಶಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಸತ್ಯನಾರಾಯಣ ವೈ. ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ಅವರು ಪ್ರಬಲವಾಗಿ ವಾದ ಮಂಡಿಸಿದ್ದರು. ಸಾಕ್ಷ್ಯಗಳು ಮತ್ತು ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು, ಆರೋಪಿಗಳ ಮೇಲಿನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 57,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.