ಶ್ರೀನಗರ/ಲೇಹ್ ಮಾರ್ಚ್ 28 : ಶ್ರೀನಗರ-ಲೇಹ್ ಹೆದ್ದಾರಿಯ (NH-1) ಜೋಜಿಲಾ ಪಾಸ್ ಬಳಿ ಶುಕ್ರವಾರ ಸಂಭವಿಸಿದ ಭೀಕರ ಹಿಮಪಾತಕ್ಕೆ ಕನಿಷ್ಠ 7 ಜನರು ಬಲಿಯಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಮಪಾತದ ಅಡಿಯಲ್ಲಿ ಹಲವಾರು ವಾಹನಗಳು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ.

11,575 ಅಡಿ ಎತ್ತರದಲ್ಲಿರುವ ಜೋಜಿಲಾ ಪಾಸ್ನ ಲಡಾಖ್ ಬದಿಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯ ಬೆನ್ನಲ್ಲೇ ಗಡಿ ರಸ್ತೆ ಸಂಸ್ಥೆ (BRO) ಮತ್ತು ವಿಪತ್ತು ಪರಿಹಾರ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಹಿಮದ ಅಡಿಯಲ್ಲಿ ಸಿಲುಕಿರುವವರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿವೆ. ಲಡಾಖ್ ಲೆಫ್ಟಿನೆಂಟ್ ಗವರ್ನರ್ ಅವರು ಪರಿಸ್ಥಿತಿಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.
ಸುಮಾರು 434 ಕಿ.ಮೀ ಉದ್ದದ ಈ ಆಯಕಟ್ಟಿನ ಹೆದ್ದಾರಿಯು ಹಿಮಪಾತದಿಂದಾಗಿ ಸಂಪೂರ್ಣವಾಗಿ ಬಂದ್ ಆಗಿದೆ. ಚಳಿಗಾಲದಲ್ಲಿ ಈ ಮಾರ್ಗವು ಪದೇ ಪದೇ ಮುಚ್ಚಲ್ಪಡುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರವಾಗಿ 14.2 ಕಿ.ಮೀ ಉದ್ದದ ಜೋಜಿಲಾ ಸುರಂಗ ನಿರ್ಮಾಣ ಹಂತದಲ್ಲಿದೆ. ಇದು ಪೂರ್ಣಗೊಂಡರೆ ಲಡಾಖ್ಗೆ ಎಲ್ಲಾ ಹವಾಮಾನದಲ್ಲೂ ಸುಗಮ ಸಂಪರ್ಕ ಕಲ್ಪಿಸುವ ಏಷ್ಯಾದ ಅತಿ ಉದ್ದದ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ.