ನೇಪಾಳ, ಮಾರ್ಚ್ 15: ಭಾರತೀಯ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ದುರ್ಘಟನೆ ನೇಪಾಳದ Shahid Lakhan Rural Municipality ವ್ಯಾಪ್ತಿಯ ಕಾಂಟಾರ್ ಪ್ರದೇಶದಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಮುತ್ತು ಕುಮಾರ್ (58), ಅನಾಮಾಲಿಕ್ (58), ಮೀನಾಕ್ಷಿ (59), ಶಿವಗಾಮಿ (53), ವಿಜಯಲ್ (57), ಮೀನಾ (58) ಹಾಗೂ ತಮಿಳರಸಿ (60) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಭಾರತೀಯರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ವೇಳೆಯಲ್ಲಿ ಬಸ್ನಲ್ಲಿ ಒಟ್ಟು 16 ಮಂದಿ ಪ್ರಯಾಣಿಕರು ಇದ್ದರು. ಅವರು Manakamana Templeಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮನಕಾಮನಾದಿಂದ ಮಜುವಾ ಕಡೆಗೆ ಬರುತ್ತಿದ್ದ ವೇಳೆ ವಾಹನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 200 ಮೀಟರ್ ಇಳಿಜಾರಿನ ಪ್ರದೇಶಕ್ಕೆ ಉರುಳಿಬಿದ್ದಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೂ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪೊಲೀಸರು, ಸ್ಥಳೀಯರು ಹಾಗೂ ರಕ್ಷಣಾ ತಂಡಗಳ ಸಹಾಯದಿಂದ ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಕ್ರೋಬಸ್ ಚಾಲಕ ಅಪಘಾತದಿಂದ ಯಾವುದೇ ಗಾಯವಾಗದೆ ಪಾರಾಗಿದ್ದರೆ, ಸಹಾಯಕನಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಚಾಲಕ ಮತ್ತು ಸಹಾಯಕನನ್ನು ಹೊರತುಪಡಿಸಿ ಉಳಿದ ಪ್ರಯಾಣಿಕರೆಲ್ಲರೂ ಭಾರತೀಯ ನಾಗರಿಕರಾಗಿದ್ದರು. ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.