ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ 6ನೇ ಬಲಿ

ಮಂಗಳೂರು ಮೇ.22: ಮೂಡಬಿದ್ರೆ ಕಡಂದಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಗುರುವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡ 55ರ ಹರೆಯದ ವ್ಯಕ್ತಿಯ ಗಂಟಲ ದ್ರವ ಮಾದರಿ ವರದಿ ಬಂದಿದ್ದು, ಮೃತ ವ್ಯಕ್ತಿಗೆ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿರುವ ಸಂಖ್ಯೆ 6 ಕ್ಕೇರಿಕೆಯಾಗಿದೆ.

ಮೇ 20ರಂದು ಮುಂಬೈನಿಂದ ಆಗಮಿಸಿದ್ದ 55 ವರ್ಷದ ವ್ಯಕ್ತಿಯನ್ನು ಮೂಡಬಿದ್ರೆಯ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕೊರೊನಾ ಭಯ ಮತ್ತು ಭವಿಷ್ಯದ ಚಿಂತೆಯಿಂದಾಗಿ ವ್ಯಕ್ತಿ ಕ್ವಾರಂಟೈನ್ ಕೇಂದ್ರದಲ್ಲಿ ಗುರುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇವರ ಅಂತ್ಯಸಂಸ್ಕಾರ ಬೋಳೂರು ಚಿತಾಗಾರದಲ್ಲಿ ನಡೆಯಲಿದೆ.

ಇನ್ನು ಇಂದು ಮುಂಬೈನಿಂದ ಬಂದ 29ರ ಹರೆಯದ ಬೆಳ್ತಂಗಡಿಯ ಮಹಿಳೆಗೂ ಸೊಂಕು ದೃಢಪಟ್ಟಿದೆ. ಇಂದು ಬಂದ 26 ವರದಿಗಳಲ್ಲಿ 24 ನೆಗೆಟಿವ್ ಬಂದಿದ್ದು, ಇನ್ನೂ ಜಿಲ್ಲೆಯಲ್ಲಿ 580 ವರದಿ ಬರಲು ಬಾಕಿ ಇದೆ. ಸದ್ಯ ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದ್ದು, 36 ಮಂದಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದು, 21 ಮಂದಿ ಗುಣಮುಖರಾಗಿದ್ದಾರೆ.