ಬೆಂಗಳೂರು ನವೆಂಬರ್ 21: ಟ್ರಾಫಿಕ್ ಫೈನ್ ಹಾಕಿಸಿಕೊಂಡಿರುವ ವಾಹನ ಸವಾರರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ಕೊಟ್ಟಿದ್ದು, ಮತ್ತೊಂದು ಬಾರಿ ಶೇಕಡ 50 ರ ಡಿಸ್ಕೌಂಟ್ ಆಫರ್ ನೀಡಿದ್ದು, ದಂಡ ಬಾಕಿ ಇರುವವರು ಕಟ್ಟಬೇಕೆಂದು ತಿಳಿಸಿದೆ.

ಸಾರಿಗೆ ಇಲಾಖೆಯ ದಂಡ ಬಾಕಿ ಹಾಗೂ ಪೊಲೀಸ್ ಇಲಾಖೆಯ ಇ-ಚಲನ್ ಮೂಲಕ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಾಜ್ಯ ಸರಕಾರ ಶೇ. 50ರಷ್ಟು ರಿಯಾಯಿತಿ ಘೋಷಿಸಿದೆ. ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ರಿಯಾಯಿತಿ ಲಭ್ಯವಿದೆ. ಪೊಲೀಸ್ ಇಲಾಖೆಯು ಇ – ಚಲನ್ ಮೂಲಕ ದಾಖಲಿಸಿದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಈ ಹಿಂದೆ 4 ಬಾರಿ ಶೇ. 50 ರಷ್ಟು ರಿಯಾಯಿತಿ ನೀಡಲಾಗಿತ್ತು.
ಇದೇ ಮೊದಲ ಬಾರಿಗೆ ಸಾರಿಗೆ ಇಲಾಖೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ರಿಯಾಯಿತಿ ಘೋಷಿಸಲಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು 1991 – 92 ರಿಂದ 2019 – 20ರವರೆಗೆ ದಾಖಲಿಸಿರುವ ಪ್ರಕರಣಗಳ ಬಾಕಿ ದಂಡ ಪಾವತಿಗೆ ರಿಯಾಯಿತಿ ಸಿಗಲಿದೆ. ಪೊಲೀಸ್ ಇಲಾಖೆಯಂತೆಯೇ ಸಾರಿಗೆ ಇಲಾಖೆ ಪ್ರಕರಣಗಳ ಬಾಕಿ ದಂಡ ಪಾವತಿಗೂ ವಿನಾಯಿತಿ ಘೋಷಿಸುವಂತೆ ಸಾರಿಗೆ ಇಲಾಖೆ ಆಯುಕ್ತರು ಸರಕಾರಕ್ಕೆ ಈ ಹಿಂದೆ ಹಲವು ಬಾರಿ ಪ್ರಸ್ತಾವ ಸಲ್ಲಿಸಿದ್ದರು. ಸಾರಿಗೆ ಇಲಾಖೆಯಲ್ಲಿ2018-19ಕ್ಕಿಂತ ಪೂರ್ವದಲ್ಲಿದಾಖಲಾದ ಪ್ರಕರಣಗಳಲ್ಲಿವಾಹನ ಮಾಲೀಕರಿಗೆ ಶೇ. 50ರಷ್ಟು ರಿಯಾಯಿತಿ ನೀಡುವಂತೆ ಪ್ರಸ್ತಾವದಲ್ಲಿಕೋರಿದ್ದರು. ಆದರೆ, ಸರಕಾರ ಪೊಲೀಸ್ ಇಲಾಖೆಯ ಪ್ರಕರಣಗಳಿಗೆ ಮಾತ್ರ ಶೇ. 50ರಷ್ಟು ದಂಡ ವಿನಾಯಿತಿ ನೀಡಿತ್ತು. ರಾಜ್ಯದ ನಾನಾ ಆರ್‌ಟಿಒಗಳ ವ್ಯಾಪ್ತಿಯಲ್ಲಿ1991 – 92 ರಿಂದ 2019 – 20ರವರೆಗೆ ದಾಖಲಾಗಿರುವ ಪ್ರಕರಣಗಳ ಪೈಕಿ ಸುಮಾರು 1.04 ಲಕ್ಷ ಪ್ರಕರಣಗಳಲ್ಲಿಅಂದಾಜು 52 ಕೋಟಿ ರೂ. ದಂಡ ಬಾಕಿಯಿದೆ. ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಸಂಬಂಧಪಟ್ಟ ಆರ್‌ಟಿಒ ಕಚೇರಿಗಳಿಗೆ ತೆರಳಿ ಬಾಕಿ ದಂಡ ಪಾವತಿಸುವ ಮೂಲಕ ರಿಯಾಯಿತಿ ಪಡೆಯಬಹುದು.
ಇನ್ನು ಪೊಲೀಸ್ ಇಲಾಖೆಯ ಇ-ಚಲನ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿವಾಹನ ಸವಾರರು ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ), ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳ ವೆಬ್‌ಸೈಟ್‌ನಲ್ಲಿವಿವರ ಪಡೆದು ದಂಡ ಪಾವತಿಸಬಹುದು. ಜಿಲ್ಲೆಗಳಲ್ಲಿ ಸಮೀಪದ ಪೊಲೀಸ್ ಠಾಣೆಗಳಿಗೆ ಹೋಗಿ ದಂಡ ಕಟ್ಟಬಹುದು. ಆನ್‌ಲೈನ್‌ನಲ್ಲಿಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್‌ಪಿ) ಆ್ಯಪ್, ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಬಿಟಿಪಿ ಅಸ್ತ್ರಂ ಆ್ಯಪ್ ಮೂಲಕ ದಂಡ ಪಾವತಿಸಬಹುದಾಗಿದೆ.



