ಮಂಡ್ಯ, ಡಿಸೆಂಬರ್ 13: ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹವಾಗಿ 5 ಲಕ್ಷ ರೂ. ನೀಡುವಂತೆ ರೈತ ಮಕ್ಕಳು, ಬಿಜೆಪಿ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಯುವ ರೈತರು ಹಾಗೂ ಬಿಜೆಪಿ ಕಾರ್ಯಕರ್ತರು, ವರನಂತೆ ಹಣೆಗೆ ಬಾಸಿಂಗ, ತಲೆಗೆ ಮೈಸೂರು ಪೇಟ ಹಾಕಿಕೊಂಡು ಅಣುಕು ಪ್ರದರ್ಶನ ಮಾಡಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಕೃಷಿ ನಂಬಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂದಿರುವ ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಇದರಿಂದ ಯುವ ರೈತರಿಗೆ ಬದುಕಿನ ಗ್ಯಾರಂಟಿ ಇಲ್ಲವಾಗಿದೆ. ಹಾಗಾಗಿ ಸರ್ಕಾರ ಶಾದಿ ಭಾಗ್ಯದ ಮಾದರಿ ರೈತರನ್ನು ಮದುವೆಯಾಗುವ ಯುವತಿಯರಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕೆಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗ ಎನ್ನುವ ತಾರತಮ್ಯವಿಲ್ಲದೆ ಅಖಂಡ ಕರ್ನಾಟಕಕ್ಕೆ ಈ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.



