ಲಖ್ನೋ, ಫೆಬ್ರವರಿ 24 : ಡಬಲ್ ಡೆಕ್ಕರ್ ಬಸ್ ಉರುಳಿ ಬಿದ್ದ ಐವರು ಮೃತಪಟ್ಟಿದ್ದು, ಕನಿಷ್ಠ 45 ಮಂದಿ ಗಾಯಗೊಂಡ ಘಟನೆ ಲಖ್ನೋದಲ್ಲಿನ ಪೂರ್ವಾಂಚಲ್ ಎಕ್ಸ್ಪ್ರೆಸ್ವೇನಲ್ಲಿ ನಡೆದಿದೆ.

ಮೃತರನ್ನು ಬಿರೇಂದ್ರ (30), ಅಂಜಲಿ (8), ಪ್ರಿಯಾಂಶು (15), ಆರು ವರ್ಷದ ಮಗು ಮತ್ತು 30 ವರ್ಷದ ಒಬ್ಬ ವ್ಯಕ್ತಿ ಎಂದು ಗುರುತಿಸಲಾಗಿದೆ. ಗಾಯಗೊಂಡ 28 ಪ್ರಯಾಣಿಕರನ್ನು ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಏಪೆಕ್ಸ್ ಟ್ರಾಮಾ ಸೆಂಟರ್ಗೆ ರವಾನಿಸಲಾಗಿದೆ. ಗಾಯಾಳುಗಳಲ್ಲಿ ಏಳು ಮಕ್ಕಳು, 12 ಪುರುಷರು ಮತ್ತು ಒಂಬತ್ತು ಮಹಿಳೆಯರು ಸೇರಿದ್ದಾರೆ. ಉಳಿದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಅಪಘಾತ ಸಂಭವಿಸಿದಾಗ ಬಸ್ ಪಂಜಾಬ್ನ ಲುಧಿಯಾನಾದಿಂದ ಬಿಹಾರದ ಮೊತಿಹಾರಿಗೆ ತೆರಳುತ್ತಿತ್ತು. ಘಟನೆ ನಂತರ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದು, ಪ್ರಯಾಣಿಕರು ಉರುಳಿದ ಬಸ್ ಒಳಗೆ ಸಿಲುಕಿಕೊಂಡಿದ್ದರು.
ಇದೇ ವೇಳೆ ಪ್ರಯಾಣಿಕರು ಅಪಘಾತಕ್ಕೂ ಸುಮಾರು ಅರ್ಧ ಗಂಟೆ ಮೊದಲು ಚಾಲಕ ರಸ್ತೆ ಬದಿಯ ಧಾಬಾದಲ್ಲಿ ಮದ್ಯಪಾನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ನಂತರ ಕ್ರೇನ್ ಸಹಾಯದಿಂದ ಬಸ್ ನ್ನು ಸಮೀಪದ ಟೋಲ್ ಪ್ಲಾಜಾಗೆ ಎಳೆಯಲಾಯಿತು. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಲಖ್ನೋದಲ್ಲಿನ ಲೋಕಬಂಧು ಆಸ್ಪತ್ರೆಯ ವೈದ್ಯರನ್ನು ಕರೆಸಲಾಗಿತ್ತು. ಅಪಘಾತ ಸ್ಥಳದಲ್ಲಿ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಸೇರಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಘಟನೆಗೆ ಕಾರಣವಾಗಿರುವ ಬಸ್ ಚಾಲಕ ಸೋಂಪಾಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಮುಂದಿನ ತನಿಖೆ ಮುಂದುವರಿದಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.