ಬಿಹಾರ, ಮಾರ್ಚ್ 29: ಶೈಕ್ಷಣಿಕ ಪ್ರವಾಸದ ವೇಳೆ ಮದ್ಯಪಾನ ಮಾಡಿದ ಆರೋಪದ ಮೇಲೆ ಐವರು ಶಿಕ್ಷಕರನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದಲ್ಲಿ ಮಾರ್ಚ್ 28ರಂದು ನಡೆದಿದೆ.

ಬಂಧಿತರನ್ನು ಶಿಷ್ಯಾಂಶ ಕುಮಾರ್, ದೀಪನಾರಾಯಣ ರಾಮ್, ಇಂಗ್ಲಿಷ್ ಕುಮಾರ್, ಧೀರೇಂದ್ರ ಕುಮಾರ್ ಹಾಗೂ ಮಿಥು ಕುಮಾರ್ ಎಂದು ಗುರುತಿಸಲಾಗಿದೆ. ಇವರು ‘ಬಿಹಾರ ದರ್ಶನ’ ಯೋಜನೆಯಡಿ ವಿದ್ಯಾರ್ಥಿಗಳೊಂದಿಗೆ ನೇಪಾಳಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು.
ನೇಪಾಳದಿಂದ ವಾಪಸ್ಸಾಗುವ ವೇಳೆ ಭೀಮನಗರ ಚೆಕ್ಪೋಸ್ಟ್ನಲ್ಲಿ ಭದ್ರತಾ ತಪಾಸಣೆ ನಡೆಸಿದಾಗ, ಶಿಕ್ಷಕರು ಮದ್ಯಪಾನ ಮಾಡಿರುವುದು ಪತ್ತೆಯಾಯಿತು. ಅನುಮಾನ ವ್ಯಕ್ತವಾದ ಹಿನ್ನೆಲೆ, ಅವರನ್ನು ತಕ್ಷಣವೇ ನಿಲ್ಲಿಸಿ ಉಸಿರು ವಿಶ್ಲೇಷಕ (ಬ್ರೇತ್ ಅನಲೈಸರ್) ಯಂತ್ರದ ಮೂಲಕ ಪರೀಕ್ಷಿಸಲಾಯಿತು. ಪರೀಕ್ಷೆಯ ಫಲಿತಾಂಶದಲ್ಲಿ ಐವರೂ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ಪ್ರಿಯದರ್ಶಿ ಮಾಹಿತಿ ನೀಡಿದ್ದು, ಬಿಹಾರದಲ್ಲಿ ಮದ್ಯಪಾನ, ಖರೀದಿ, ಮಾರಾಟ ಹಾಗೂ ಸಾಗಣೆ ಸಂಪೂರ್ಣ ನಿಷೇಧವಾಗಿದ್ದು, ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಂಧಿತ ಶಿಕ್ಷಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಸಂಬಂಧಪಟ್ಟ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆರೋಪಿಗಳ ವಿರುದ್ಧ ಅಮಾನತು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸುಪೌಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಾವನ್ ಕುಮಾರ್ ತಿಳಿಸಿದ್ದಾರೆ.