ನವದೆಹಲಿ , ಏಪ್ರಿಲ್ 04: ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತ ಶ್ರೇಣಿಯನ್ನು ಕೇಂದ್ರಬಿಂದುವಾಗಿಸಿಕೊಂಡು ಸಂಭವಿಸಿದ ಭೂಕಂಪಕ್ಕೆ ಎಂಟು ಮಂದಿ ಬಲಿಯಾದ ಘಟನೆ ನಡೆದಿದ್ದು, ಭಾರತದಲ್ಲೂ ಕೆಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವ ಉಂಟಾದ ಬಗ್ಗೆ ವರದಿಯಾಗಿದೆ.

ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ (NCS) ಅಧಿಕೃತ ವರದಿಯಂತೆ, 2026ರ ಏಪ್ರಿಲ್ 3ರ ಶುಕ್ರವಾರ ರಾತ್ರಿ ಸರಿಯಾಗಿ 9:42 ಗಂಟೆಗೆ ಭೂಮಿ ನಡುಗಿದೆ. ರಿಕ್ಟರ್ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿರುವ ಈ ಕಂಪನವು ಭೂಮಿಯ ಮೇಲ್ಮೈಯಿಂದ ಸುಮಾರು 150 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಕಂಪನದ ಕೇಂದ್ರಬಿಂದು ಅಫ್ಘಾನಿಸ್ತಾನದ ಜುರ್ಮ್ ನಗರಕ್ಕೆ ಸಮೀಪವಿರುವ ಹಿಂದೂ ಕುಶ್ ಪ್ರದೇಶ ಎಂದು ಗುರುತಿಸಲಾಗಿದೆ.
ದೆಹಲಿ-ಎನ್ಸಿಆರ್ ವಲಯದ ನೋಯ್ಡಾ, ಗುರುಗ್ರಾಮ ಮತ್ತು ಗಾಜಿಯಾಬಾದ್ ಮಾತ್ರವಲ್ಲದೆ ಪಂಜಾಬ್, ಹರಿಯಾಣ, ಚಂಡೀಗಢ ಹಾಗೂ ಜಮ್ಮು-ಕಾಶ್ಮೀರದಾದ್ಯಂತ ಸುಮಾರು 15 ಸೆಕೆಂಡುಗಳ ಕಾಲ ತೀವ್ರ ಕಂಪನ ಉಂಟಾಗಿದೆ. ರಾತ್ರಿಯ ಸಮಯದಲ್ಲಿ ಬಹುಮಹಡಿ ಕಟ್ಟಡಗಳು ಮತ್ತು ಮನೆಗಳು ಜೋರಾಗಿ ಅಲುಗಾಡಿದ್ದರಿಂದ ಜನರು ಭಯಭೀತರಾಗಿ ಬೀದಿಗಳಿಗೆ ಓಡಿ ಬಂದಿದ್ದಾರೆ. ದೆಹಲಿಯ ಜನನಿಬಿಡ ಪ್ರದೇಶಗಳಲ್ಲಿ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಮಧ್ಯರಾತ್ರಿಯವರೆಗೂ ತೆರೆದ ಮೈದಾನಗಳಲ್ಲಿಯೇ ಕಾಲ ಕಳೆದಿದ್ದಾರೆ.
ಅಫ್ಘಾನಿಸ್ತಾನದ ಕಾಬೂಲ್ ಪ್ರಾಂತ್ಯದಲ್ಲಿ ಭೂಕಂಪದ ತೀವ್ರತೆಗೆ ಮನೆಗಳು ಕುಸಿದು ಒಂದೇ ಕುಟುಂಬದ ಎಂಟು ಸದಸ್ಯರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ. ಪಾಕಿಸ್ತಾನದ ಇಸ್ಲಾಮಾಬಾದ್ ಮತ್ತು ಪೇಶಾವರ ನಗರಗಳಲ್ಲಿಯೂ ಪ್ರಬಲ ಕಂಪನದ ಅನುಭವವಾಗಿದ್ದು, ಅನೇಕ ಕಡೆ ಗೋಡೆಗಳು ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿದೆ.