ಬೆಂಗಳೂರು ಮಾರ್ಚ್ 23: ನಿದ್ರೆ ಮಂಪರಿನಲ್ಲಿ ಖಾಸಗಿ ಬಸ್ ರಸ್ತೆ ಬದಿಯ ಪೆನ್ಸಿಂಗ್ ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ (Ramanagara) ವ್ಯಾಪ್ತಿಯಲ್ಲಿ ಸಂಭವಿಸಿದೆ.

ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ (Bangalore Mysore Expressway) ಚನ್ನಪಟ್ಟಣ ತಾಲೂಕಿನ ಸಂಕಲಗೆರೆ (Sankalagere) ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಕೇರಳದಿಂದ ಬೆಂಗಳೂರಿನತ್ತ ಬರುತ್ತಿದ್ದ ಬಸ್, ನಿದ್ರೆ ಮಂಪರಿನಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೆನ್ಸಿಂಗ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಿಕೆ ಟ್ರಾವೆಲ್ಸ್ ಎಂಬ ಬಸ್ ಅಪಘಾತಕ್ಕೀಡಾಗಿದ್ದು, ಮೃತರ ಪೈಕಿ ಇಬ್ಬರು ಬೆಂಗಳೂರಿನವರಾಗಿದ್ದಾರೆ. ಮೃತರನ್ನು ಕೇರಳದ ಕಾಜಿಕೋಟೆಯ ಮೊಹಮ್ಮದ್ ಫರಾನ್(22), ಸುಲ್ಫಿ (45), ಬೆಂಗಳೂರಿನ ಕಲಾಸಿಪಾಳ್ಯದ ನಿವಾಸಿ ರಶೀದ್(45) ಹಾಗೂ ಆಡುಗೋಡಿಯ ಅಣ್ಣೆಪಾಳ್ಯ ನಿವಾಸಿ ಸಾಕೇರ್ ಎಂದು ಗುರುತಿಸಲಾಗಿದೆ. ಕೇರಳದ ಕಣ್ಣೂರಿನ ಅಬ್ದುಲ್, ಅಲೇನ್ ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನತದೃಷ್ಟ ಪಿಕೆ ಟ್ರಾವೆಲ್ಸ್ ಬಸ್ ತಡರಾತ್ರಿ ಕೇರಳದ ಕ್ಯಾಲಿಕಟ್ನಿಂದ ಬೆಂಗಳೂರಿಗೆ ಹೊರಟಿತ್ತು. ಬೆಳಗಿನ ಜಾವ 4.10 ನಿಮಿಷಕ್ಕೆ ಅಪಘಾತ ಸಂಭವಿಸಿದೆ. ಬಸ್ನಲ್ಲಿ ಒಟ್ಟು 42 ಜನರ ಪ್ರಯಾಣಿಸುತ್ತಿದ್ದರು. ಅಪಘಾತದ ತೀವ್ರತೆ ಹೇಗಿತ್ತೆಂದರೆ, ಫೆನ್ಸಿಂಗ್ಗೆ ಡಿಕ್ಕಿಹೊಡೆದ ಬಸ್ ನಂತರವೂ ಸುಮಾರು 100 ಮೀಟರ್ ಸಂಚರಿಸಿತ್ತು. ತಡೆಗೋಡೆ ಇಲ್ಲದೇ ಇದ್ದರೆ ಇನ್ನಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.
ಸದ್ಯ ಗಾಯಾಳಗಳನ್ನು ಹಾಗೂ ಮೃತದೇಹಗಳನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್ ಚಾಲಕ ರಿಯಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.