Connect with us

LATEST NEWS

19 ಕಾರ್ಮಿಕರ ಸ್ವಾಗತ ನೆಪದಲ್ಲಿ ಕಾಂಗ್ರೆಸ್- ಬಿಜೆಪಿ ಶಾಸಕರ ಕಿತ್ತಾಟ…!!

19 ಕಾರ್ಮಿಕರ ಸ್ವಾಗತ ನೆಪದಲ್ಲಿ ಕಾಂಗ್ರೆಸ್- ಬಿಜೆಪಿ ಶಾಸಕರ ಕಿತ್ತಾಟ…!!

ಮಂಗಳೂರು ಮೇ 28: ಅರಬ್ಬೀ ಸಮುದ್ರ ಮಧ್ಯೆ ಲಕ್ಷದ್ವೀಪದಲ್ಲಿ ಅತಂತ್ರರಾಗಿದ್ದ ಕಾರ್ಮಿಕರನ್ನು ಎರಡು ತಿಂಗಳ ಬಳಿಕ ಮಂಗಳೂರಿಗೆ ಕರೆತರಲಾಗಿದೆ. ಒಟ್ಟು 19 ಮಂದಿ ಇದ್ದ ಕಾರ್ಮಿಕರನ್ನು ಅಮಿನ್ ದೀವ್ ಎನ್ನುವ ಹಡಗಿನಲ್ಲಿ ಮಂಗಳೂರಿನ ಹಳೆ ಬಂದರಿಗೆ ತರಲಾಗಿದ್ದು ಇವರನ್ನು ಸ್ವಾಗತಿಸುವ ನೆಪದಲ್ಲಿ ಮಂಗಳೂರಿನ ಬಿಜೆಪಿ ಮತ್ತು ಕಾಂಗ್ರೆಸಿನ ಶಾಸಕರು, ಬೆಂಬಲಿಗರು ಸೇರಿ ಕಿತ್ತಾಟ ನಡೆಸಿದ್ದಾರೆ.

19 ಜನ ಕಾರ್ಮಿಕರನ್ನು ಸ್ವಾಗತಿಸಲು ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಎಂಎಲ್ಸಿ ಐವಾನ್ ಡಿಸೋಜ, ಮೇಯರ್ ದಿವಾಕರ ಪಾಂಡೇಶ್ವರ ಹಾಗೂ ಕಾಂಗ್ರೆಸ್, ಬಿಜೆಪಿಯ 200 ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಹಳೆ ಬಂದರಿನಲ್ಲಿ ಸೇರಿದ್ದರು. ಮೀಡಿಯಾ ಮಂದಿ ಫೋಟೋ, ವಿಡಿಯೋ ತೆಗೆಯಲು ರೆಡಿಯಾಗುತ್ತಿದ್ದಂತೆ ಗುಲಾಬಿ ಹೂವನ್ನು ಹಿಡಿದು ತಳ್ಳಾಟ ನಡೆಸಿದ್ದಾರೆ.

ಮಾಜಿ ಮೇಯರ್ ಕೆ. ಅಶ್ರಫ್ ಮತ್ತವರ ಬೆಂಬಲಿಗರು ಕೂಡ ಜೊತೆ ಸೇರಿದ್ದು ಕೊರೊನಾ ನಿಯಮದ ಸಾಮಾಜಿಕ ಅಂತರವನ್ನೂ ಮರೆತು ತಳ್ಳಾಡಿದ್ದಾರೆ.  ಯಾವುದೇ ಸಾಮಾಜಿಕ ಅಂತರ ಇಟ್ಟುಕೊಳ್ಳದೆ ಹಡಗಿನಿಂದ ಹೊರಬರುತ್ತಿದ್ದ ಕಾರ್ಮಿಕರನ್ನು ಸ್ವಾಗತಿಸಲು ತಳ್ಳಾಟ ನಡೆಸಿದ್ದಾರೆ. ಈ ನಡುವೆ, ಕಾರ್ಮಿಕರ ಆರೋಗ್ಯ ತಪಾಸಣೆ, ಇನ್ನಿತರ ಅಗತ್ಯ ಕೆಲಸಕ್ಕೆ ಆಗಮಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಕಿರಿ ಕಿರಿ ಅನುಭವಿಸಿದರು.

ವಿವಿಧ ಕೆಲಸಗಳಿಗಾಗಿ ಲಕ್ಷದ್ವೀಪಕ್ಕೆ ತೆರಳಿದ್ದ ಕಾರ್ಮಿಕರು ಲಾಕ್ ಡೌನ್ ಬಳಿಕ ಕೆಲಸ ಇಲ್ಲದೆ ಕಂಗಾಲಾಗಿದ್ದರು. ಲಕ್ಷದ್ವೀಪದ ಕಿಲ್ತಾನ್, ಕವರತ್ತಿ, ಅಗಟ್ಟಿ ದ್ವೀಪದಲ್ಲಿ ಬಾಕಿಯಾಗಿದ್ದ ಕಾರ್ಮಿಕರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ನೌಕಾ ಪಡೆಯ ಸಹಾಯದಿಂದ ಯಶಸ್ವಿಯಾಗಿ ಮರಳಿ ತರಲಾಗಿದೆ. ಎಲ್ಲ ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್ ಕೇಂದ್ರಗಳಿಗೆ ಕಳಿಸಿಕೊಡಲಾಗಿದೆ.