ನಿಫಾಹ್ ವೈರಸ್ ಕೇರಳದಲ್ಲಿ ಹೈ ಅಲರ್ಟ್ ಘೋಷಣೆ

ಕೇರಳ ಮೇ 21: ಕೇರಳದಲ್ಲಿ ಕೆಲವು ದಿನಗಳಿಂದ ಕಾಣಿಸಿಕೊಂಡಿರುವ ಮಾರಣಾಂತಿಕ ವೈರಲ್ ನಿಪಾಹ್ ಗೆ ಇಬ್ಬರು ಬಲಿಯಾಗಿದ್ದಾರೆ. ಅತೀ ವಿರಳವಾಗಿರುವ ಈ ಮಾರಣಾಂತಿಕ ನಿಪಾಹ್ ವೈರಸ್ ಸೊಂಕಿಗೆ ಈವರೆಗೆ ಸುಮಾರು 13 ಮಂದಿ ಬಲಿಯಾಗಿದ್ದಾರೆ ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ.

ಕುಟುಂಬವೊಂದರ ಇಬ್ಬರು ವ್ಯಕ್ತಿಗಳ ರಕ್ತವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ನಿಪಾಹ್ ವೈರಸ್ ಇರುವುದು ಪತ್ತೆಯಾಗುವ ಮೂಲಕ ಈ ಮಾರಣಾಂತಿಕ ವೈರಸ್ ಪ್ರಕರಣ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಈ ನಡುವೆ ನಿಫಾ ವೈರಸ್ ಗೆ ತುತ್ತಾಗಿದ್ದ ನರ್ಸ್ ವೊಬ್ಬರು ಕೂಡಾ ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಿಫಾ ವೈರಸ್ ಪತ್ತೆಯಾಗುತ್ತಿದ್ದಂತೆ ಕೇರಳದಾದ್ಯಂತ ಮುಂಜಾಗ್ರತಾ ಕ್ರಮವಾಗಿ ಹೈಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಉನ್ನತ ಅಧಿಕಾರಿಗಳ ತಂಡ ಸೋಮವಾರ ಕೇರಳಕ್ಕೆ ಆಗಮಿಸಲಿದ್ದು, ಸೋಂಕು ವರದಿಯಾದ ಊರಿನಲ್ಲಿ ಪರಿಶೀಲನೆ ನಡೆಸಲಿದೆ ಎಂದು ವರದಿ ಹೇಳಿದೆ.

ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡ ಈ ಮಾರಣಾಂತಿಕ ನಿಪಾಹ್ ವೈರಸ್ ಅತ್ಯಧಿಕ ವೇಗವಾಗಿ ಹರಡುವ ರೋಗಾಣುವಾಗಿದೆ. ಈ ನಿಪಾಹ್ ವೈರಸ್ ಬಾವಲಿ, ಹಂದಿ ಹಾಗೂ ಇನ್ನಿತರ ಪ್ರಾಣಿಗಳಿಂದ ಹರಡುತ್ತದೆ. ಜ್ವರ, ವಾಂತಿ, ತಲೆನೋವು ಹಾಗೂ ಉಸಿರಾಟದ ತೊಂದರೆ ಈ ವೈರಸ್ ನ ಲಕ್ಷಣವಾಗಿದೆ

Facebook Comments

comments