ಭೋಪಾಲ್ ಎಪ್ರಿಲ್ 19: ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯಲು ಅಪಾಯಕಾರಿ ಬೈಕ್ ಸ್ಟಂಟ್ ಮಾಡುತ್ತಾ ರೀಲ್ಸ್ ಚಿತ್ರೀಕರಿಸುತ್ತಿದ್ದ ಮೂವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಮೌಗಂಜ್ನಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 135ರಲ್ಲಿ ಈ ದುರಂತ ಸಂಭವಿಸಿದೆ.

ಲಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬೇಲಾ ಗ್ರಾಮದ ನಿವಾಸಿಗಳಾದ ಅಮರೀಶ್ ಕೋಲ್ (22), ಉಪಲಕ್ಷ್ಯ ಕೋಲ್ (17) ಮತ್ತು ಹೇಮರಾಜ್ ಕೋಲ್ (17) ಮೃತಪಟ್ಟವರು. ಪಲ್ಸರ್ 220 ಬೈಕ್ನಲ್ಲಿ ಈ ಮೂವರು ಅತೀ ವೇಗವಾಗಿ ಚಲಿಸುತ್ತಾ ಸ್ಟಂಟ್ ಮಾಡುತ್ತಿದ್ದರು. ಈ ವೇಳೆ ಒಬ್ಬ ಯುವಕ ಕೈಯಲ್ಲಿ ಗನ್ ಮಾದರಿಯ ಲೈಟರ್ ಹಿಡಿದು ಶೋ ಮಾಡುತ್ತಿದ್ದರೆ, ಮತ್ತೊಂದು ಬೈಕ್ನಲ್ಲಿದ್ದ ಸ್ನೇಹಿತರು ಇದರ ವಿಡಿಯೋ ಮಾಡುತ್ತಿದ್ದರು.
ಅತೀ ವೇಗದಲ್ಲಿದ್ದ ಬೈಕ್, ರಸ್ತೆ ಬದಿಯಲ್ಲಿ ನಿಂತಿದ್ದ ಟ್ರೇಲರ್ ಟ್ರಕ್ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರೂ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಬೈಕ್ ಡಿಕ್ಕಿಯಾದ ಬೆನ್ನಲ್ಲೇ ಹಿಂದಿನಿಂದ ಬಂದ ಮತ್ತೊಂದು ವಾಹನ ಕೂಡ ಟ್ರಕ್ಗೆ ಅಪ್ಪಳಿಸಿದ್ದು, ಅದರಲ್ಲಿದ್ದವರು ಗಂಭೀರ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಟ್ರೇಲರ್ ಟ್ರಕ್ ಜಪ್ತಿ ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ.