ತಿರುವನಂತಪುರಂ: ಅಪ್ರಾಪ್ತ ವಯಸ್ಸಿನ ಬಾಲಕಿಯರ ಹಾಗೂ ಯುವ ಮಹಿಳಾ ಕ್ರಿಕೆಟಿಗರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಮಾಜಿ ಕೋಚ್ ಎಂ. ಮನು (40) ಅವರಿಗೆ ತಿರುವನಂತಪುರಂನ ತ್ವರಿತಗತಿ ವಿಶೇಷ ನ್ಯಾಯಾಲಯವು ಒಟ್ಟು 99 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಆರೋಪಿಯ ವಿರುದ್ಧ ದಾಖಲಾಗಿದ್ದ ಆರು ಪೋಕ್ಸೊ ಪ್ರಕರಣಗಳ ಪೈಕಿ ಈಗಾಗಲೇ ನಾಲ್ಕು ಪ್ರಕರಣಗಳ ತೀರ್ಪು ಹೊರಬಂದಿದ್ದು, ಒಟ್ಟು ಶಿಕ್ಷೆಯ ಅವಧಿ 127 ವರ್ಷಕ್ಕೆ ತಲುಪಿದೆ. ಇನ್ನುಳಿದ ಪ್ರಕರಣಗಳ ತೀರ್ಪೂ ಬಾಕಿ ಇರುವುದರಿಂದ ಶಿಕ್ಷೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಶ್ರೀವರಾಹಂ ನಿವಾಸಿಯಾಗಿರುವ ಮನು ವಿರುದ್ಧದ ಮೂರನೇ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ಅಂಜು ಮೀರಾ ಬಿರ್ಲಾ ಅವರು, ಆರೋಪಿಗೆ 48 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹79,000 ದಂಡ ವಿಧಿಸಿದ್ದಾರೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC) ಸೆಕ್ಷನ್ 427 ರ ಅಡಿಯಲ್ಲಿ ನ್ಯಾಯಾಲಯವು ಈ ಎಲ್ಲ ಶಿಕ್ಷೆಗಳನ್ನು ಅನುಕ್ರಮವಾಗಿ (ಒಂದಾದ ನಂತರ ಮತ್ತೊಂದು) ಅನುಭವಿಸಬೇಕು ಎಂದು ನಿರ್ದೇಶಿಸಿದೆ. ಈ ಹಿಂದೆ ಮನುಗೆ ಮೊದಲ ಪ್ರಕರಣದಲ್ಲಿ 16 ವರ್ಷ ಹಾಗೂ ಎರಡನೇ ಪ್ರಕರಣದಲ್ಲಿ 35 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ 48 ವರ್ಷಗಳ ಶಿಕ್ಷೆ ಸೇರಿದಂತೆ ಒಟ್ಟು ಅವಧಿ 99 ವರ್ಷಗಳಾಗಿದೆ. ಅಲ್ಲದೆ, ನಾಲ್ಕನೇ ಪ್ರಕರಣದಲ್ಲೂ ಈತ ತಪ್ಪಿತಸ್ಥನೆಂದು ಘೋಷಿತನಾಗಿದ್ದು, ಅದರಲ್ಲಿ ಮತ್ತೆ ಆರೋಪಿಗೆ 28 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರೊಂದಿಗೆ ಆರೋಪಿ ಒಟ್ಟು 127 ವರ್ಷಗಳ ಕಾಲ ಜೈಲಿನಲ್ಲೆ ಇರಬೇಕಾಗಿದೆ.
ಪ್ರಾಸಿಕ್ಯೂಷನ್ ವರದಿಯ ಪ್ರಕಾರ, ಮೂರನೇ ಪ್ರಕರಣದ ಸಂತ್ರಸ್ತೆ 2018 ರಲ್ಲಿ 5 ನೇ ತರಗತಿ ಓದುತ್ತಿದ್ದಾಗ ತಿರುವನಂತಪುರಂನ ಪ್ರಮುಖ ಕ್ರಿಕೆಟ್ ತರಬೇತಿ ಕೇಂದ್ರಕ್ಕೆ ಸೇರಿದ್ದಳು. ಆರಂಭದಲ್ಲಿ ಬಾಲಕಿಯ ನಂಬಿಕೆ ಗಳಿಸಿದ್ದ ಕೋಚ್ ಮನು, ವಿಶೇಷ ತರಬೇತಿ ನೀಡುವ ನೆಪದಲ್ಲಿ ಜಿಮ್ನಾಷಿಯಂ, ಪ್ರಾಕ್ಟಿಸ್ ನೆಟ್ಸ್ ಹಾಗೂ ಸ್ನಾನಗೃಹಗಳಂತಹ ಏಕಾಂತ ಪ್ರದೇಶಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅಷ್ಟೇ ಅಲ್ಲದೆ, ಬಾಲಕಿಯ ನಗ್ನ ಚಿತ್ರ ಹಾಗೂ ವೀಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಕಾಮುಕ ಕೋಚ್, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕ್ರಿಕೆಟ್ ವೃತ್ತಿಜೀವನವನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಸಂತ್ರಸ್ತೆ ವರ್ಷಗಳ ಕಾಲ ಮೌನವಾಗಿದ್ದಳು.
ಮಾರ್ಚ್ 28, 2024 ರಂದು ತಿರುವನಂತಪುರದಲ್ಲಿ ನಡೆದ ಬಾಲಕಿಯರ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಈ ಘೋರ ಅಪರಾಧಗಳು ಬೆಳಕಿಗೆ ಬಂದವು. ಹಲವು ವರ್ಷಗಳ ನಂತರ ಮೈದಾನದಲ್ಲಿ ಕೋಚ್ ಮನು ನೋಡಿದ ಸಂತ್ರಸ್ತೆ ತೀವ್ರ ಭೀತಿಯಿಂದ ಪ್ಯಾನಿಕ್ ಅಟ್ಯಾಕ್ಗೆ ಒಳಗಾಗಿದ್ದಾಳೆ. ಆಕೆಯ ಈ ಸ್ಥಿತಿಯನ್ನು ಕಂಡು ಸಹ ಆಟಗಾರ್ತಿಯರು ಪ್ರಶ್ನಿಸಿದಾಗ ಲೈಂಗಿಕ ದೌರ್ಜನ್ಯದ ರಹಸ್ಯ ಬಯಲಾಗಿದೆ. ಈಕೆಯ ಧೈರ್ಯ ಕಂಡು ಮತ್ತಷ್ಟು ಯುವ ಕ್ರಿಕೆಟಿಗರು ದೂರು ನೀಡಲು ಮುಂದೆ ಬಂದಿದ್ದು, ಕಂಟೋನ್ಮೆಂಟ್ ಪೊಲೀಸರು ಒಟ್ಟು 6 ಪೋಕ್ಸೊ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಆರ್.ಎಸ್. ವಿಜಯ್ ಮೋಹನ್ ಕಾನೂನು ಹೋರಾಟ ನಡೆಸಿದ್ದರು.