ಇಂದೋರ್ ಸೆಪ್ಟೆಂಬರ್ 16: ಕುಡಿದ ಮತ್ತಿನಲ್ಲಿ ಜನರ ಗುಂಪಿನ ಮೇಲೆ ಟ್ರಕ್ ಚಲಾಯಿಸಿದ ಪರಿಣಾಮ ಹಲವು ವಾಹನಗಳ ಮೇಲೆ ಹರಿದು ಮೂವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ವಿದ್ಯಾ ಪ್ಯಾಲೇಸ್‌ನಿಂದ ಬರುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಸುಮಾರು 1.5 ಕಿ.ಮೀಗಳಷ್ಟು ದೂರ ಎದುರಿದ್ದ ಎಲ್ಲಾ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಹೋಗಿದೆ. ಟ್ರಕ್ ಮೊದಲು ಬೈಕ್​​ಗೆ ಡಿಕ್ಕಿ ಹೊಡೆದಿದೆ.ನಂತರವೂ ಟ್ರಕ್ ಮುಂದೆ ಚಲಿಸುತ್ತಲೇ ಇತ್ತು. ಕಾರುಗಳು, ಇ-ರಿಕ್ಷಾಗಳು, ಆಟೋರಿಕ್ಷಾಗಳು ಮತ್ತು ಪಾದಚಾರಿಗಳಿಗೂ ಡಿಕ್ಕಿ ಹೊಡೆದಿದೆ. ಜನರು ಕಿರುಚುತ್ತಾ ಓಡುತ್ತಿದ್ದರು, ಆದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ನಜ್ಜುಗುಜ್ಜಾದ ಬೈಕಿಗೆ ಬೆಂಕಿ ಹೊತ್ತಿಕೊಂಡಿತು ಜ್ವಾಲೆಗಳು ಟ್ರಕ್‌ನ ಮುಂಭಾಗವನ್ನು ಆವರಿಸಿದ ಪರಿಣಾಮ ಮಧ್ಯೆ ಸಿಲುಕಿದ ಬೈಕ್ ಸವಾರ ಸಾವನ್ನಪ್ಪಿದ್ದಾರೆ.

ಅಪಘಾತದ ಬೆನ್ನಲ್ಲೇ ಟ್ರಕ್‌ ಚಾಲಕನನ್ನು ಬಂಧಿಸಿದ್ದು, ಮಲ್ಹರ್‌ಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.

ಟ್ರಕ್‌ ಹರಿದ ಪರಿಣಾಮ ಶವಗಳು ಚೂರುಚೂರಾಗಿದ್ದು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದ ಬೆನ್ನಲ್ಲೇ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕೋಪಗೊಂಡ ಸ್ಥಳೀಯರು ಟ್ರಕ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಆದರೆ, ಈ ವರದಿಗಳನ್ನು ನಿರಾಕರಿಸಿರುವ ಸ್ಥಳೀಯರು, ಟ್ರಕ್‌ ಕೆಳಗೆ ಸಿಲುಕಿಗೊಂಡಿದ್ದ ಬೈಕ್‌ನ ಟ್ಯಾಂಕ್‌ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದಿದ್ದಾರೆ. ಏತನ್ಮಧ್ಯೆ, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Share Information