ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಇಬ್ಬರ ಬಂಧನ

ಮಂಗಳೂರು ಡಿಸೆಂಬರ್ 22: ನಗರದ ಹೊರವಲಯದ ತೋಟಬೆಂಗ್ರೆಯ ಸರಕಾರಿ ಶಾಲೆಯ ಬಳಿ ಬೀಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಳ್ಳಾಲ ಮೊಗವೀರಪಟ್ನ ನಿವಾಸಿ ವಿಜಿತ್ ಯಾನೆ ಶಿವರಾಜ್‌ಕುಮಾರ್ (26) ಮತ್ತು ತೋಟಬೆಂಗ್ರೆ ನಿವಾಸಿ ಶ್ರಾವಣ್ ಯಾನೆ ಚಾನು (24) ಎಂದು ಗುರುತಿಸಲಾಗಿದೆ.

ಡಿಸೆಂಬರ್ 19 ರಂದು ರಾತ್ರಿ 2:30ರ ವೇಳೆಗೆ ಪಣಂಬೂರು ಠಾಣಾ ಸಿಬ್ಬಂದಿ ಗಸ್ತಿನಲ್ಲಿದ್ದು ತೋಟಬೆಂಗ್ರೆಯ ಸರಕಾರಿ ಶಾಲೆಯ ಬಳಿ ತಲುಪಿದಾಗ ಆರೋಪಿಗಳಾದ ವಿಜೀತ್, ರಮೀತ್, ಶ್ರಾವಣ್, ಆಕಾಶ್ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿ, ಸಮವಸ್ತ್ರದಲ್ಲಿದ್ದವರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ವಿಜಿತ್ ಮತ್ತು ಶ್ರಾವಣ್ ಎಂಬ ಆರೋಪಿಗಳನ್ನು ಡಿಸೆಂಬರ್ 21ರಂದು ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹದಳದ ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದಸ್ತಗಿರಿಯಾದ ವಿಜಿತ್ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿಶೀಟರ್ ತೆರೆಯಲಾಗಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. ಶ್ರಾವಣ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣ ದಾಖಲಾಗಿವೆ.

3 Shares

Facebook Comments

comments