DAKSHINA KANNADA
2 ದಶಕದ ಸಮಸ್ಯೆಗೆ 2 ದಿನದಲ್ಲಿ ಗತಿ ಕಾಣಿಸಿದ ಶಾಸಕ ವೇದವ್ಯಾಸ್
2 ದಶಕದ ಸಮಸ್ಯೆಗೆ 2 ದಿನದಲ್ಲಿ ಗತಿ ಕಾಣಿಸಿದ ಶಾಸಕ ವೇದವ್ಯಾಸ್
ಮಂಗಳೂರು, ಜೂನ್ 03 : ಮಂಗಳೂರು ನಗರದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜೆಪ್ಪಿನಮೊಗರು ಪ್ರದೇಶದ ಸ್ಮಶಾನಗುಡ್ಡೆ ಪರಿಸರದಲ್ಲಿ ವಾಸಿಸುವ ನಾಗರಿಕರು ಕಳೆದ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರು.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶವಾಗಿದ್ದರೂ ಗುಡ್ಡ ಪ್ರದೇಶವಾಗಿರುವುದರಿಂದ ತುಂಬೆಯಿಂದ ಪೈಪಿನ ಮೂಲಕ ಬರುವ ನೀರು ಈ ಭಾಗ ಎತ್ತರದ ಪ್ರದೇಶದ ಕಾರಣದಿಂದ ತಲುಪುತ್ತಿರಲಿಲ್ಲ.
2 ದಶಕಗಳಿಂದ ಆನೇಕ ಬಾರಿ ಸ್ಥಳಿಯರು ಪಾಲಿಕೆ, ಜನಪ್ರತಿನಿಧಿಗಳ ಮನೆ ಬಾಗಿಲು ತಟ್ಟಿದ್ದರೂ ಪರಿಹಾರ ಕಾಣದೇ ಹಾಗೇಯೇ ಉಳಿದಿತ್ತು.
ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಕಾಣದೇ ಅಲ್ಲಿನ ನಾಗರಿಕರು ಶಾಸಕ ವೇದವ್ಯಾಸ ಕಾಮತ್ ಅವರನ್ನು ಭೇಟಿಯಾಗಿ ಕುಡಿಯುವ ನೀರಿನ ಸಂಕಷ್ಟವನ್ನು ಬಗೆಹರಿಸಲು ಕೋರಿದ್ದರು.
ಈ ಭಾಗದಲ್ಲಿನ ಜನರ ಕುಡಿಯುವ ನೀರಿನ ಬವನೆ ಕಂಡು ಶಾಸಕ ವೇದವ್ಯಾಸ್ ಕಾಮತ್ ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ ಜಪ್ಪಿನಮೊಗರು ಸ್ಮಶಾನಗುಡ್ಡೆ ಯಲ್ಲಿ ತತ್‌ಕ್ಷಣ ಕೊಳವೆಬಾವಿ ತೋಡುವಂತೆ ಸೂಚನೆ ನೀಡಿದ್ದರು.
ಶಾಸಕರ ಸೂಚನೆಯಂತೆ ಎರಡು ದಿನಗಳೊಳಗೆ ಅಲ್ಲಿ ಕೊಳವೆಬಾವಿ ತೋಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರನ್ನು ಮೇಲಕ್ಕೆತ್ತಿ ಸ್ಥಳೀಯರಿಗೆ ಸರಬರಾಜು ಮಾಡಿದ್ದಾರೆ.
ಈ ಮೂಲಕ ಈ ಭಾಗದ ದಶಕದ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಅವರ ಶೀಘ್ರ ಕ್ರಮ, ಮತ್ತು ಸ್ಪಂದನೆ ನಾಗರಿಕರ ಶ್ಲಾಘನೆಗೆ ಪಾತ್ರವಾಗಿದೆ.