ಉಡುಪಿ ಮಾರ್ಚ್ 11: ಡುಪಿ: ಒಂದು ವಾರದ ಹಿಂದೆ ಸಂತೆಕಟ್ಟೆಯ ಲಕ್ಷ್ಮಿನಗರ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಮಾರ್ಚ್ 10) ನಿಧನರಾಗಿದ್ದಾರೆ.

ಹೆರ್ಗ ಶೆಟ್ಟಿಬೆಟ್ಟು ನಿವಾಸಿ ಮೊಹಮ್ಮದ್ ಝಾದ್ (19) ಮೃತಪಟ್ಟ ದುರ್ದೈವಿ. ಸಂತೆಕಟ್ಟೆಯ ಲಕ್ಷ್ಮಿನಗರ ರಸ್ತೆಯಲ್ಲಿ ಸರ್ಕಾರಿ ಬಸ್ ಮತ್ತು ಇವರು ಸಂಚರಿಸುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಝಾದ್ ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಮೃತ ಮೊಹಮ್ಮದ್ ಝಾದ್ ಇತ್ತೀಚೆಗಷ್ಟೇ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದರು. ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಅರಸಿ ಗಲ್ಫ್ ರಾಷ್ಟ್ರಕ್ಕೆ ಉದ್ಯೋಗಕ್ಕಾಗಿ ತೆರಳಲು ಸಕಲ ಸಿದ್ಧತೆ ನಡೆಸುತ್ತಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಗಲ್ಫ್ ಕನಸು ನನಸಾಗುವ ಮೊದಲೇ ಅಪಘಾತ ಇವರ ಬದುಕನ್ನು ಬಲಿಪಡೆದಿದೆ. ಮೃತರು ತಂದೆ, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.