ರಾಜಸ್ಥಾನ, ಏಪ್ರಿಲ್ 25: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಬೊಲೆರೊ ವಾಹನದಲ್ಲಿ ಬಂದ ಕಿಡಿಗೇಡಿಗಳ ತಂಡವೊಂದು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ರೈನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಆಕ್ರೋಶಗೊಂಡ ಗ್ರಾಮಸ್ಥರು ಸುಟ್ಟು ಹಾಕಿದ್ದಾರೆ.

ದೌಸಾ ಜಿಲ್ಲೆಯ ಬಸ್ವಾ ನಿವಾಸಿ ರಾಹುಲ್ ಸೈನಿ (25) ಬಂಧಿತ ಆರೋಪಿ. ತಲೆಮರೆಸಿಕೊಂಡಿರುವ ಇತರ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ವಿವಿಧ ತಂಡಗಳನ್ನು ರಚಿಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ 15 ವರ್ಷದ ಬಾಲಕಿ ಎಂದಿನಂತೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಬೊಲೆರೊ ವಾಹನದಲ್ಲಿ ಬಂದ ಇಬ್ಬರು ಯುವಕರು ಆಕೆಯನ್ನು ಬಲವಂತವಾಗಿ ವಾಹನದೊಳಗೆ ಎಳೆದುಕೊಂಡಿದ್ದರು. ನಿರ್ಜನ ಪ್ರದೇಶದ ಕೊಠಡಿಯೊಂದರಲ್ಲಿ ಮೂವರೂ ಸೇರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಕೃತ್ಯದ ವಿಡಿಯೋ ಚಿತ್ರೀಕರಿಸಿದ ಆರೋಪಿಗಳು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಬಾಲಕಿಯ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.
ಬಂಧಿತ ರಾಹುಲ್ ಸೈನೀಯ ಮೊಬೈಲ್ ಫೋನ್ ವಶಪಡಿಸಿಕೊಂಡಿರುವ ಪೊಲೀಸರಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಆತನ ಮೊಬೈಲ್ನಲ್ಲಿ ಇತರ ಹಲವು ಯುವತಿಯರ ಆಕ್ಷೇಪಾರ್ಹ ವಿಡಿಯೋಗಳು ಪತ್ತೆಯಾಗಿದ್ದು, ಈತ ಸರಣಿ ಅಪರಾಧಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಡಿವೈಎಸ್ಪಿ ಮನೀಶಾ ಮೀನಾ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಬಾಲಕಿಯನ್ನು ಅಪಹರಿಸುವುದನ್ನು ಕಂಡಿದ್ದ ಇತರ ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಇದರಿಂದ ಎಚ್ಚೆತ್ತ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಹುಡುಕಾಟ ನಡೆಸುತ್ತಿದ್ದರು. ಬಾಲಕಿಯನ್ನು ವಾಪಸ್ ಬಿಡಲು ಬಂದ ಆರೋಪಿಗಳು ಜನರನ್ನು ಕಂಡು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಸಾರ್ವಜನಿಕರು ಆರೋಪಿಗಳ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಧಾವಿಸಿದ ರೈನಿ ಪೊಲೀಸರು ಸುಟ್ಟ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.