ಕಾಬೂಲ್ ಡಿಸೆಂಬರ್ 03: ಒಂದು ಕುಟುಂಬದ 13 ಜನರನ್ನುಕೊಂದ ಆರೋಪಿಯನ್ನು ತಾಲಿಬಾನ್ ಆಡಳಿತ ಬಹಿರಂಗವಾಗಿ 80 ಸಾವಿರ ಜನರ ಎದುರೇ ಗುಂಡಿಕ್ಕಿ ಕೊಂದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಫ್ಗಾನಿಸ್ತಾನದ ಸುಪ್ರೀಂ ಕೋರ್ಟ್‌ನ ಅಧಿಕೃತ ಹೇಳಿಕೆಯ ಪ್ರಕಾರ, ಅಬ್ದುಲ್ ರೆಹಮಾನ್ ಮತ್ತು ಆತನ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 13 ಜನರನ್ನು ಕೊಂದ ಅಪರಾಧಕ್ಕಾಗಿ ಮಂಗಲ್ ಎಂಬ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗಿದೆ. ಈ ಆದೇಶವನ್ನು ಅಫ್ಗಾನಿಸ್ತಾನದ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಜಾದಾ ಅನುಮೋದಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಸಂತ್ರಸ್ತರ ಕುಟುಂಬಕ್ಕೆ ಕ್ಷಮೆ ಮತ್ತು ಶಿಕ್ಷೆಯ ಆಯ್ಕೆಯನ್ನು ನೀಡಲಾಗಿತ್ತು. ಆದರೆ,ಸಂತ್ರಸ್ತ ಕುಟುಂಬ ಕಿಸಾಸ್‌ಗೆ(‘ಕಣ್ಣಿಗೆ ಕಣ್ಣು’ ಎಂಬ ಇಸ್ಲಾಮಿಕ್ ತತ್ವ) ಒತ್ತಾಯಿಸಿದ ನಂತರ, ಮರಣದಂಡನೆ ಆದೇಶ ನೀಡಲಾಯಿತು’ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಹೇಳಿಕೆ ತಿಳಿಸಿದೆ. ಸಂತ್ರಸ್ತರ ಕುಟುಂಬದ ಸಂಬಂಧಿ 13 ವರ್ಷದ ಬಾಲಕ, ಮಂಗಲ್‌ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಮೊದಲಿಗೆ ಕೊಲೆಗಾರನನ್ನು ಮೈದಾನಕ್ಕೆ ಕರೆತಂದರು. ವೈದ್ಯರು ಬಂದು ತಪಾಸಣೆ ನಡೆಸಿದರು. ಬಳಿಕ, ಷರಿಯಾ ಕಾನೂನಿನ ಪ್ರಕಾರ ಗುಂಡಿಕ್ಕಿ ಕೊಲ್ಲಲಾಯಿತು. ಅಫ್ಗಾನ್ ವರದಿಗಳ ಪ್ರಕಾರ, ತಾಲಿಬಾನ್ ಅಧಿಕಾರಿಗಳು ಮತ್ತು ಸಂತ್ರಸ್ತರ ಕುಟುಂಬ ಸೇರಿದಂತೆ ಸುಮಾರು 80,000 ಜನರು ಸಾರ್ವಜನಿಕ ಮರಣದಂಡನೆಯನ್ನು ವೀಕ್ಷಿಸಿದರು.



