KARNATAKA
ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಪಿಸ್ತೂಲ್, ಮಾರಕಾಸ್ತ್ರಗಳೊಂದಿಗೆ ಬಂದು ಬೆದರಿಕೆ, ಅಪ್ರಾಪ್ತರು ಸೇರಿ 13 ಮಂದಿ ಬಂಧನ..!
ಉಡುಪಿ : ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತವರ ಸ್ನೇಹಿತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಗಂಗೊಳ್ಳಿ ಪೊಲೀಸರು 13 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಸೇರಿದ್ದಾರೆ. ಮನೆ ಸಮೀಪ ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದ ವೇಳೆ ಮಾರಕಾಯುಧಗಳೊಂದಿಗೆ ಬಂದ ದುಷ್ಕರ್ಮಿಗಳ ತಂಡವೊಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತವರ ಸ್ನೇಹಿತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿತ್ತು. ಈ ಹಿನ್ನೆಲೆಯಲ್ಲಿ ಸಚಿನ್ ಪೂಜಾರಿ ಆಲೂರು, ಶರತ್ ದೇವಾಡಿಗ ಆಲೂರು, ವಿಶ್ವನಾಥ ಪಡುಕೋಣೆ, ರೋಶನ್ ಫೆರ್ನಾಂಡೀಸ್, ಪ್ರದೀಪ್ ಪಡುಕೋಣೆ, ಕಾರ್ತಿಕ್ ಪೂಜಾರಿ, ಪ್ರಕಾಶ್ ಮೊಗವೀರ, ಕೀರ್ತಿಕ್ ಪೂಜಾರಿ, ಗಣೇಶ್ ಪೂಜಾರಿ, ವಿಶಾಲ್, ಗೌತಮ್, ರಾಹುಲ್, ಸಂತೋಷ್ ನಾಡ, ಮಹೇಂದ್ರ, ಜಗದೀಶ್ ಮೊಗವೀರ, ಸಂತೋಷ್ ಹಡವು, ಅಂಕಿತ್ ಪೂಜಾರಿ, ಸಾರ್ಥಕ್, ಶಿವರಾಜ್, ಸಾಧನ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿತ್ತು.
ಇವರಲ್ಲಿ ಆಲೂರು ಹೊಯ್ಯಾಣ ನಿವಾಸಿ ಸಚಿನ್ (24), ಆಲೂರು ರಾಮೇಶ್ವರ ನಗರ ನಿವಾಸಿ ಶರತ್ ದೇವಾಡಿಗ (24), ಕೆಂಬೈಲು ನಿವಾಸಿಗಳಾದ ಕಾರ್ತಿಕ್ (22), ಹಾಗೂ ಕೀರ್ತಿಕ್ (20), ಪಡುಕೋಣೆ ನಿವಾಸಿ ಪ್ರಕಾಶ್ (20), ಪಡುಕೋಣೆಯ ಹನುಮಂತನಗರ ನಿವಾಸಿ ಜಗದೀಶ್ (31), ಪಡುಕೋಣೆ ರಾಮಮಂದಿರ ನಿವಾಸಿ ಗೌತಮ್ (23), ಪಡುಕೋಣೆ ನಿವಾಸಿ ಮಹೇಂದ್ರ ಪೂಜಾರಿ, ಹಡವು ನಿವಾಸಿ ಸಂತೋಷ್ ಮೊಗವೀರ, ರೋಶನ್ ಫೆರ್ನಾಂಡೀಸ್, ಆಲೂರು ನಿವಾಸಿ ಪ್ರಸಾದ್ ಆಚಾರ್ಯ (30) ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಸೇರಿದ್ದಾರೆ. ಬಂಧಿತ ಆರೋಪಿಗಳಿಂದ 1 ಏರ್‌ಪಿಸ್ತೂಲ್, 4 ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶ್ರೀಕಾಂತ್ ಹಾಗೂ ಆರೋಪಿ ವಿಶ್ವನಾಥ ಪಡುಕೋಣೆ ಹಾಗೂ ಇತರರ ಮಧ್ಯೆ ಹಳೆಯ ದ್ವೇಷವಿದ್ದು, ಅದೇ ದ್ವೇಷದಿಂದ ಈ ಕೃತ್ಯ ಎಸಗಲಾಗಿದೆ ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್, ಅಪರಾಧ ವಿಭಾಗದ ಪಿಎಸ್‌ಐ ಬಸವರಾಜ್ ಕನಶೆಟ್ಟಿ, ಸಿಬ್ಬಂದಿ ಗಳಾದ ನಾಗರಾಜ, ಕೇಶವ, ಸಂದೀಪ, ರಾಘವೇಂದ್ರ, ರಾಷ್ಟ್ರಪತಿ, ಚಾಲಕ ಸುಧೀರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಐದು ದಿನಗಳ ಹಿಂದೆ ಪಡುಕೋಣೆ ನಿವಾಸಿ ಶ್ರೀಕಾಂತ ಪೂಜಾರಿ ಹಡವು ಗ್ರಾಮದ ಶ್ರೀಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ಸಂಜೆ ಸ್ನೇಹಿತರಾದ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಚಂದ್ರ ಪಡುಮನೆ, ಸುರೇಶ, ಶಿವಕುಮಾರ್ ಹೆಬ್ಬಾರ್ ಮತ್ತವರ ಮಗ ಮನು ಹೆಬ್ಬಾರ್, ಸುದೇಶ್ ಶೆಟ್ಟಿ ಜೊತೆಯಲ್ಲಿ ಮಾತನಾಡುತ್ತಾ ನಿಂತಿದ್ದ ವೇಳೆ ಆರೋಪಿಗಳು ಏಕಾಏಕಿ ಮಾರಕಾಯುಧ ಗಳೊಂದಿಗೆ ಬಂದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ. ಆರೋಪಿ ಸಚಿನ್ ಪೂಜಾರಿ, ಶರತ್ ಸೇರಿದಂತೆ ಆರೋಪಿಗಳ ತಂಡ ಪಿಸ್ತೂಲ್, ಕಬ್ಬಿಣದ ಪೈಪ್‌ಗೆ ತುದಿಯಲ್ಲಿ ಹಲ್ಲುಗಳುಳ್ಳ ಚಕ್ರ ಇರುವ ಆಯುಧ, ಕಬ್ಬಿಣದ ರಾಡ್, ಮರದ ಸೊಂಟೆ ಇತ್ಯಾದಿ ಮಾರಕಾಯುಧಗಳನ್ನು ಹಿಡಿದು ಮಾರಕಾಯುಧಗಳನ್ನು ಬೀಸುತ್ತಾ ಬೆದರಿಸಿದ್ದಾರೆ. ಶ್ರೀಕಾಂತ ಹಾಗೂ ಸ್ನೇಹಿತರು ಅಲ್ಲೆ ಸ್ವಲ್ಪ ದೂರ ಹೋಗಿ ನಿಂತಿದ್ದು, ಶಿವಕುಮಾರ್ ಹೆಬ್ಬಾರ್ ಹಾಗೂ ಅವರ ಮಗ ಮನು ಆರೋಪಿ ಗಳನ್ನು ಎದುರಿಸಲು ಹೋದಾಗ ಅವರಿಗೆ ಆರೋಪಿ ವಿಶ್ವನಾಥ ಪಡುಕೋಣೆ, ರೋಶನ್ ಫೆರ್ನಾಂಡಿಸ್, ಪ್ರವೀಣ ಪಡುಕೋಣೆ ತಮ್ಮಲ್ಲಿದ್ದ ಮಾರಕಾಯುಧಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಪರಿಣಾಮ ಶಿವಕುಮಾರ್ ಹೆಬ್ಬಾರ್ ಕೈ ಕಾಲಿಗೆ ಹಾಗೂ ಮನು ಹೆಬ್ಬಾರ್ ತಲೆಗೆ ಗಾಯಗಳಾಗಿತ್ತು.
You must be logged in to post a comment Login