ಚಿತ್ರದುರ್ಗ, ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಬಳಿ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 11 ಮಂದಿ ಸಜೀವವಾಗಿ ದಹನಗೊಂಡಿದ್ದಾರೆ.

ಡಿವೈಡರ್ ದಾಟಿ ಬಂದ ಲಾರಿ ಸೀಬರ್ಡ್ ಖಾಸಗಿ ಸ್ಲೀಪರ್ ಕೋಚ್ ಬಸ್ ಗೆ ಡಿಕ್ಕಿ ಹೊಡೆದಿದ್ದು, 11 ಮಂದಿ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ.

ಭೀಕರ ದುರಂತಕ್ಕೆ ರಾಜ್ಯವೇ ಮಮ್ಮುಲ ಮರುಗಿದೆ. ಅಪಘಾತದ ಭಯಾನಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಖಾಸಗಿ ಬಸ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಕೆಲವೇ ಸೆಕೆಂಡುಗಳಲ್ಲಿ, ವಾಹನವು ದಟ್ಟ ಹೊಗೆ ಮತ್ತು ಎತ್ತರದ ಜ್ವಾಲೆಗಳಿಂದ ಆವೃತವಾಯಿತು, ಕ್ಯಾಬಿನ್ ಒಳಗೆ ಮಲಗಿದ್ದ ಅನೇಕ ಪ್ರಯಾಣಿಕರು ಸಿಕ್ಕಿಹಾಕಿಕೊಂಡರು. ಬಸ್ ಚಾಲಕ, ಕ್ಲೀನರ್ ಮತ್ತು ಕಂಡಕ್ಟರ್ ಪವಾಡಸದೃಶವಾಗಿ ಪಾರಾದರು. ಅದೃಷ್ಟವಶಾತ್, ಬೆಂಕಿ ಹೊತ್ತಿಕೊಂಡ ಬಸ್ಸಿನ ಪಕ್ಕದಲ್ಲಿದ್ದ ಮತ್ತೊಂದು ಬಸ್ ಕೂಡ ಡಿಕ್ಕಿಯಿಂದ ಪಾರಾಯಿತು.

ಸೀಬರ್ಡ್ ಟೂರಿಸ್ಟ್ ಬಸ್, ಬೆಂಗಳೂರಿನಿಂದ ಗೋಕರ್ಣಕ್ಕೆ 32 ಜನರನ್ನು ಸಾಗಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ ಸಂಭವಿಸಿದೆ.ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಂಟೇನರ್ ಟ್ರಕ್ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ, ಬಸ್ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸ್ನ ಡೀಸೆಲ್ ಟ್ಯಾಂಕ್ ಬಳಿ ಡಿಕ್ಕಿ ಹೊಡೆದ ಪರಿಣಾಮ ಇಂಧನ ಚಿಮ್ಮಿ ಕ್ಷಣವೇ ಬೆಂಕಿ ಹೊತ್ತಿಕೊಂಡಿತು.

ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ಹೊರಟಿದ್ದ ಜನ ನಿದ್ದೆಯ ಮುಂಪರಿನಲ್ಲಿಯೇ ಸುಟ್ಟು ಕರಕಲಾಗಿದ್ದಾರೆ. ಯಮನ ರೂಪನಲ್ಲಿ ಬಂದ ಲಾರಿ ಬಸ್ ಗೆ ಅಪ್ಪಳಿಸಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಒಳಗೆ ಸಿಲುಕಿದ ಪ್ರಯಾಣಿಕರು ಬಸ್ ನಿಂದ ಹೊರಲಾರದೆ ಸಜೀವ ದಹನವಾಗಿದ್ದಾರೆ.. ಗುರುತು ಪತ್ತೆಯಾಗದಷ್ಟು ಬಸ್ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಗಾಯಾಳುಗಳನ್ನು ಹಿರಿಯೂರು, ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share Information