DAKSHINA KANNADA
8.96 ಸೆಕೆಂಡ್‍ನಲ್ಲಿ 100 ಮೀ. ಕ್ರಮಿಸಿದ ಕಂಬಳದ ಉಸೇನ್ ಬೋಲ್ಟ್ ಶ್ರೀನಿವಾಸ್ ಗೌಡ
ಮಂಗಳೂರು, ಮಾರ್ಚ್ 20 : ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ ಗೌಡ ವೇಣೂರಿನ ಪೆರ್ಮುಡದಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ 100 ಮೀಟರ್ ಓಟವನ್ನು 8.96 ಸೆಕೆಂಡ್‌ನಲ್ಲಿ ಕ್ರಮಿಸುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆಯುತ್ತಿರುವ ಸೂರ್ಯ-ಚಂದ್ರ ಜೋಡುಕೆರೆ ಕಂಬಳದಲ್ಲಿ ಶ್ರೀನಿವಾಸಗೌಡ ಹೊಸ ದಾಖಲೆ ಬರೆದಿದ್ದಾರೆ. ಕೇವಲ 8.96 ಸೆಕೆಂಡ್‍ಗಳಲ್ಲಿ 100 ಮೀಟರ್ ದೂರವನ್ನು ಕ್ರಮಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೇಗಿಲು ಹಿರಿಯ ವಿಭಾಗದ ಕೋಣಗಳನ್ನು ಓಡಿಸಿದ ಶ್ರೀನಿವಾಸ್ ಗೌಡ, ಕೇವಲ 11.21 ಸೆಕೆಂಡ್‍ಗಳಲ್ಲಿ 125 ಮೀಟರ್ ದೂರವನ್ನು ಕ್ರಮಿಸಿದ್ದಾರೆ. ಅಂದರೆ ಕೇವಲ 8.96 ಸೆಕೆಂಡ್‍ಗಳಲ್ಲಿ 100 ಮೀಟರ್ ತಲುಪಿದ್ದು, ಈ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಸರಗಟ್ಟಿದ್ದಾರೆ.
2020ರ ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಮೂಡಬಿದ್ರೆ ಮಿಜಾರು ಅಶ್ವತ್ಥಪುರದ ಶ್ರೀನಿವಾಸ್ ಗೌಡ ಅವರು ದಾಖಲೆ ಬರೆದು ವಿಶ್ವದ ಗಮನ ಸೆಳೆದಿದ್ದರು. ಶ್ರೀನಿವಾಸ್ ಗೌಡ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದರು.
ಇದು ಕಂಬಳ ಕ್ರೀಡೆಯಲ್ಲಿ ಇದೂವರೆಗಿನ ಅತ್ಯಂತ ವೇಗದ ದಾಖಲೆಯಾಗಿದೆ. ಶ್ರೀನಿವಾಸ್ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿದರೆ 9.55 ಸೆಕೆಂಡ್‍ನಲ್ಲಿ ಓಟ ಪೂರ್ಣಗೊಳಿಸಿ ಬೋಲ್ಟ್ ದಾಖಲೆಯನ್ನು ಉಡಾಯಿಸಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಎಂಬಂತೆ 8.96 ಸೆಕೆಂಡ್‍ನಲ್ಲಿ 100 ಮೀಟರ್ ಕ್ರಮಿಸುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
2020ರಲ್ಲಿ ಶ್ರೀನಿವಾಸ್ ಗೌಡ ಓಡಿಸಿದ ಕೋಣಗಳು 9.55ಸೆಕೆಂಡ್‌ನಲ್ಲಿ ಓಡುವ ಮೂಲಕ ದಾಖಲೆಯಾಗಿತ್ತು. ಜ.30ರಂದು ಹೊಕ್ಕಾಡಿಗೋಳಿಯಲ್ಲಿ ನಡೆದ ಈ ಋತುವಿನ ಮೊದಲ ಕಂಬಳದಲ್ಲಿ ಶ್ರೀನಿವಾಸ ಗೌಡ ಓಟದ ವೇಳೆ ಕರೆಯಲ್ಲೇ ಬಿದ್ದು ಗಾಯಗೊಂಡು ಆ ಕಂಬಳದಿಂದ ಹಿಂದೆ ಸರಿದಿದ್ದರು. ಮುಂದಿನ ವಾರದಿಂದ ಮತ್ತೆ ಕಂಬಳ ಕರೆಗೆ ಇಳಿದ ಶ್ರೀನಿವಾಸಗೌಡ ಪದಕ ಬಾಚುತ್ತಲೇ ಮತ್ತೊಂದು ದಾಖಲೆ ಬರೆದಿದ್ದಾರೆ.