ಮುಂಬೈ ಫೆಬ್ರವರಿ 14: ನಿರ್ಮಾಣ ಹಂತದ ಮೆಟ್ರೋ ಲೈನ್ ನ ಪಿಲ್ಲರ್ ನಿಂದ ಒಂದು ಕಾಂಕ್ರಿಟ್ ಸ್ಲ್ಯಾಬ್ ರಸ್ತೆ ಬಿದ್ದ ಪರಿಣಾಮ ಒಂದು ಕಾರು ಹಾಗೂ ಆಟೋ ರಿಕ್ಷಾ ಜಖಂಗೊಂಡಿದ್ದು, ಈ ದುರ್ಘಟನೆಯಲ್ಲಿ ಓರ್ವ ಸಾವನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ,

ಮುಲುಂಡ್ ವೆಸ್ಟ್ನ ಎಲ್ಬಿಎಸ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಲೈನ್ 4 (Mumbai Metro Line 4) ರ ಪಿಲ್ಲರ್ನ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಹಠಾತ್ತನೆ ಕೆಳಗೆ ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದಿದೆ. ಜಾನ್ಸನ್ ಆಂಡ್ ಜಾನ್ಸನ್ ಕಚೇರಿಯ ಸಮೀಪವಿರುವ ಓಬೆರಾಯ್ ಪ್ರೆಮಿಸಸ್ ಬಳಿ ಈ ಘಟನೆ ನಡೆದಿದೆ. ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ವೇಳೆ ಭಾರೀ ಗಾತ್ರದ ಸ್ಲ್ಯಾಬ್ ರಸ್ತೆಗೆ ಬಿದ್ದಿದೆ. ಈ ವೇಳೆ ಕೆಳಗೆ ಸಂಚರಿಸುತ್ತಿದ್ದ ಆಟೋ ರಿಕ್ಷಾ ಮತ್ತು ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಆಟೋ ಚಾಲಕ ಮತ್ತು ಓರ್ವ ಮಹಿಳೆ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ಅವರನ್ನು ಹರಸಾಹಸ ಪಟ್ಟು ಹೊರತೆಗೆದಿದ್ದಾರೆ.

ಮುಂಬೈ ಅಗ್ನಿಶಾಮಕ ದಳದ ಪ್ರಕಾರ, ಸುಮಾರು 6 ಅಡಿ 4 ಅಡಿ ಅಳತೆಯ ಕಾಂಕ್ರೀಟ್ ತುಂಡು ಚಲಿಸುತ್ತಿದ್ದ ಆಟೋರಿಕ್ಷಾ ಮತ್ತು ಸ್ಕೋಡಾ ಕಾರಿನ ಮೇಲೆ ಬಿದ್ದಿದೆ. ಗಾಯಾಳುಗಳನ್ನು ಉಪಾಸನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ರಾಮಧನ್ ಯಾದವ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ರಾಜ್ಕುಮಾರ್ ಇಂದ್ರಜೀತ್ ಯಾದವ್ (45) ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ, ಮಹೇಂದ್ರ ಪ್ರತಾಪ್ ಯಾದವ್ (52) ಮತ್ತು ದೀಪಾ ರುಹಿಯಾ (40) ಸ್ಥಿರವಾಗಿದ್ದಾರೆ.