ನವದೆಹಲಿ ಸೆಪ್ಟೆಂಬರ್ 04: ಕೇಂದ್ರ ಸರಕಾರ ಜನರಿಗೆ ಜಿಎಸ್ ಟಿ ದರಗಳಲ್ಲಿ ಕಡಿತ ಮಾಡುವ ಮೂಲಕ ಗುಡ್ ನ್ಯೂಸ್ ಕೊಟ್ಟಿದೆ. ನವರಾತ್ರಿ ಮೊದಲ ದಿನದಿಂದಲೇ ಈ ಹೊಸ ಜಿಎಸ್ ಟಿ ದರಗಳು ಜಾರಿಗೆ ಬರಲಿದ್ದು, ಅದರಲ್ಲೂ ಆರೋಗ್ಯ, ಜೀವ ವಿಮೆಗೆ ಜಿಎಸ್‌ಟಿ ತೆಗೆದು ಹಾಕಿರುವುದು ಬಹು ದೊಡ್ಡ ಹೆಜ್ಜೆಯಾಗಿದೆ.

ಎರಡನೇ ತಲೆಮಾರಿನ ಜಿಎಸ್‌ಟಿ ಸುಧಾರಣೆ ಮೂಲಕ ದೇಶದ ಜನರು ದೀಪಾವಳಿಗೆ ಡಬಲ್ ಧಮಾಕಾ ನಿರೀಕ್ಷಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ್ದರು. ಅದರ ಬೆನ್ನಲ್ಲಿಯೇ ಹಾಲಿ ಇರುವ ಶೇ. 5, ಶೇ. 12, ಶೇ. 18 ಮತ್ತು ಶೇ .28 ತೆರಿಗೆಯ ನಾಲ್ಕು ಶ್ರೇಣಿ ಬದಲು ಶೇ. 5 ಮತ್ತು ಶೇ. 18 ಎರಡೇ ಶ್ರೇಣಿಗೆ ಇಳಿಸಲಾಗಿದೆ. ಬಹುತೇಕ ದಿನಬಳಕೆ ವಸ್ತುಗಳನ್ನು ಕನಿಷ್ಠ ತೆರಿಗೆ ವ್ಯಾಪ್ತಿಗೆ ತರುವ ತೀರ್ಮಾನ ಹೊರಬಿದ್ದಿದೆ.
ಅವಧಿ ವಿಮೆ, ಯುಲಿಪ್ ಅಥವಾ ಎಂಡೋಮೆಂಟ್ ಪಾಲಿಸಿ ಸೇರಿ ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಮ್‌ಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹೆಚ್ಚು ಜನರಿಗೆ ವಿಮಾ ಸೌಲಭ್ಯ ತಲುಪಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳು, ಹಿರಿಯ ನಾಗರಿಕರ ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಂಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. 2017ರಲ್ಲಿ ಈ ತೆರಿಗೆ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಈ ವಿಮಾ ಉತ್ಪನ್ನಗಳ ಪ್ರೀಮಿಯಂ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು.
ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಮಂಡಳಿಯು ಒಪ್ಪಿಗೆ ನೀಡಿದೆ. ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.



