Connect with us

    DAKSHINA KANNADA

    ನಾಲ್ಕೂವರೆ ವರ್ಷದಲ್ಲಿ ₹ 4,750 ಕೋಟಿ ಅನುದಾನ: ವೇದವ್ಯಾಸ ಕಾಮತ್‌

    ಮಂಗಳೂರು, ಜನವರಿ 18: ‘ನಾನು ಶಾಸಕನಾದ ಬಳಿಕ ನಗರದ ವಿವಿಧ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ನಾಲ್ಕೂವರೆ ವರ್ಷಗಳಲ್ಲಿ ₹ 4,750 ಕೋಟಿ ಅನುದಾನ ಬಿಡುಗಡೆ ಆಗಿದೆ. ಆದರೆ, ಕೈಗೆತ್ತಿಕೊಂಡ ಬಹುತೇಕ ಕಾಮಗಾರಿಗಳನ್ನು ನಿರೀಕ್ಷೆಯಂತೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್‌ ತಿಳಿಸಿದರು.

    ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಮಗಾರಿಗಳನ್ನು 2023ರ ಮಾರ್ಚ್‌ ಒಳಗೆ ಪೂರ್ಣಗೊಳಿಸುವ ಇರಾದೆ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ. ಮೂರು ವರ್ಷ ಮಳೆಗಾಲದಲ್ಲಿ ಉಂಟಾದ ಪ್ರವಾಹಗಳು, ಎರಡು ವರ್ಷ ಕೋವಿಡ್‌ ಕಾರಣದಿಂದ ಕಾಮಗಾರಿಗಳು ವಿಳಂಬವಾಗಿರುವುದು ನಿಜ’ ಎಂದು ಒಪ್ಪಿಕೊಂಡರು.

    ‘ಒಳಗೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ (ಎಂಎಸ್‌ಸಿಎಲ್‌), ಪಾಲಿಕೆ ಹಾಗೂ ಸರ್ಕಾರದ ಅನುದಾನದ ಕಾಮಗಾರಿಗಳೆಲ್ಲವೂ 2025ರ ಮಾರ್ಚ್‌ ಒಳಗೆ ಪೂರ್ಣಗೊಂಡು, ನಗರದ ಸಮಗ್ರ ಚಿತ್ರಣವೇ ಬದಲಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ‘ಜಲಸಿರಿ ಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿದ್ದೇವೆ. ಪ್ರಸ್ತುತ ತುಂಬೆಯಿಂದ ನಗರಕ್ಕೆ ಪೂರೈಕೆಯಾಗುವ ನೀರಿನಲ್ಲಿ ಶೇ 40ರಿಂದ ಶೇ 50ರಷ್ಟು ಸೋರಿಕೆ ಆಗುತ್ತಿದೆ. ಅದನ್ನು ಪತ್ತೆ ಹಚ್ಚಲೂ ಸಾಧ್ಯವಾಗುತ್ತಿಲ್ಲ. ಜಲಸಿರಿ ಯೋಜನೆಯಡಿ ನಗರದಲ್ಲಿ ಕುಡಿಯುವ ನೀರು ಪೂರೈಕೆಯ ಎಲ್ಲ ಕೊಳವೆಗಳನ್ನು ಬದಲಾಯಿಸುತ್ತಿದ್ದೇವೆ. ಈ ಯೋಜನೆ ಪೂರ್ಣಗೊಂಡ ಬಳಿಕ ನೀರು ಸೋರಿಕೆ ಪ್ರಮಾಣ ಶೇ 8ಕ್ಕಿಂತ ಕಡಿಮೆ ಇರಲಿದೆ’ ಎಂದು ಭರವಸೆ ನೀಡಿದರು.

    ‘ಜಲಸಾರಿಗೆ ಮಂಡಳಿಯ (ಮೆರಿಟೈಮ್‌ ಬೋರ್ಡ್‌) ಮೂಲಕ ಮೀನುಗಾರಿಕಾ ಬಂದರಿನ ಧಕ್ಕೆಯ ಮೂರನೇ ಹಂತದ ಅಭಿವೃದ್ಧಿಗೆ ₹ 49 ಕೋಟಿ ಅನುದಾನ ಬಿಡುಗಡೆಯಾಗಿದೆ. 7 ಮೀ ಆಳದವರೆಗೆ ಹೂಳೆತ್ತುವ ಕಾಮಗಾರಿಯನ್ನು ₹ 29 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದರಿಂದ ಭಾರಿ ಗಾತ್ರದ ಹಡಗುಗಳೂ ಮೀನುಗಾರಿಕಾ ಬಂದರಿಗೆ ಬರುವುದಕ್ಕೆ ಅವಕಾಶ ಸಿಗಲಿದೆ’ ಎಂದರು.

    ‘ಎರಡು ಕುದ್ರುಗಳನ್ನು (ದ್ವೀಪ) ₹ 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹೊಯ್ಗೆಬಜರ್‌ನಿಂದ ನೇತ್ರಾವತಿ ನದಿಯಲ್ಲಿ ಸಾಗಿ ಕೂಳೂರುವರೆಗೆ ತಲುಪುವ ಬಾರ್ಜ್‌ ಪ್ರಯಾಣ ಆರಂಭಿಸಲಿದ್ದೇವೆ. ಇದರಿಂದ ಜನರ ಓಡಾಟ ಮತ್ತು ವಾಹನಗಳ ಸಾಗಾಟಕ್ಕೂ ಅವಕಾಶ ಸಿಗಲಿದೆ. ಈ ಜಲಮಾರ್ಗದಲ್ಲಿ ಬೋಟ್‌ ನಿಲುಗಡೆಗಾಗಿ ಐದು ಕಡೆ ಸಣ್ಣ ಜೆಟ್ಟಿಗಳನ್ನು ನಿರ್ಮಿಸಲಾಗುತ್ತದೆ’ ಎಂದರು.

    ‘ನಂದಿಗುಡ್ಡೆಯ ಕೋಟಿಚೆನ್ನಯ ವೃತ್ತ, ಪಂಪ್‌ವೆಲ್‌ನ ಮಹಾವೀರ ವೃತ್ತ, ಮಾರ್ನಮಿಕಟ್ಟೆ ವೃತ್ತಗಳೂ ಶೀಘ್ರವೇ ಹೊಸ ರೂಪ ಪಡೆಯಲಿವೆ’ ಎಂದರು. ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಹಾಗೂ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಇದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply