Connect with us

    BANTWAL

    ಹೆಬ್ಬಾವಿನೊಂದಿಗೆ ಸೆಣಿಸಿದ ಬಾಲಕನಿಗೆ ಹೊಯ್ಸಳ ಶೌರ್ಯ ಪ್ರಶಸ್ತಿ

    ಹೆಬ್ಬಾವಿನೊಂದಿಗೆ ಸೆಣಿಸಿದ ಬಾಲಕನಿಗೆ ಹೊಯ್ಸಳ ಶೌರ್ಯ ಪ್ರಶಸ್ತಿ

    ಮಂಗಳೂರು ನವೆಂಬರ್ 11: ಹೆಬ್ಬಾವಿನೊಂದಿಗೆ ಸೆಣಸಿ ಸಾಹಸ ಮೆರೆದಿದ್ದ ಬಂಟ್ವಾಳ ಸಜೀಪದ ವೈಶಾಖ್ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ಮನೆ ಸಮೀಪದ ಕಾಲುದಾರಿಯಲ್ಲಿ ಸಂಜೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ತನ್ನನ್ನು ಹಿಡಿದು ನುಂಗಲು ಯತ್ನಿಸಿದ ಹೆಬ್ಬಾವಿನೊಂದಿಗೆ ವೈಶಾಕ್ ಹೋರಾಡಿದ್ದ. ಅಲ್ಲದೆ ತನ್ನ ಸಹೋದರಿಯನ್ನು ಹೆಬ್ಬಾವಿನಿಂದ ದೂರ ಇರಲು ಹೇಳಿ ಯಶಸ್ವಿಯಾಗಿದ್ದ.

    ಘಟನೆಯಲ್ಲಿ ಬಾಲಕ ಅಲ್ಪಸ್ವಲ್ಪ ಗಾಯಗಳಾಗಿದ್ದು ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು .ಬಾಲಕನ ಈ ಸಾಹಸವನ್ನು ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಆತನನ್ನು ಸನ್ಮಾನಿಸಿದ್ದವು.

    ವೈಶಾಕ್ ಸಾಹಸವನ್ನು ರಾಜ್ಯ ಸರ್ಕಾರ ಗುರುತಿಸಿ ಪ್ರಸ್ತುತ ಸಾಲಿನ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ .ಇದೀಗ ಮಕ್ಕಳ ದಿನಾಚರಣೆ ಪ್ರಯುಕ್ತ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸುವಂತೆ ಅಧಿಕೃತ ಆಹ್ವಾನ ನೀಡಲಾಗಿದೆ .

     

    ಘಟನೆಯ ವಿವರ

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ಗ್ರಾಮದ ಸಮೀಪದ ಕೊಳಕೆಯಲ್ಲಿ ಈ ಘಟನೆ ನಡೆದಿತ್ತು. ಇಲ್ಲಿನ ಸಜೀಪ ಆದರ್ಶ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ 11ರ ಹರೆಯದ ವೈಶಾಖ್‌. ವೈಶಾಖ್‌ ಎಂದಿನಂತೆ ಸಂಜೆ ಶಾಲೆಯಿಂದ ಮನೆಗೆ ಬಂದು ಉಪಾಹಾರ ಸೇವಿಸಿ, ಸಮೀಪದಲ್ಲೇ ಇರುವ ತನ್ನ ಅಜ್ಜನ ಮನೆಗೆ ತೆರಳಿದ್ದ.

    ಸಂಜೆ 6 ಗಂಟೆಯ ವೇಳೆಗೆ ಮನೆಗೆ ಮರಳಿ ಬರುತ್ತಿದ್ದಾಗ ಪೊದೆಗಳೆಡೆಯಿಂದ ಹೆಬ್ಬಾವು ಒಮ್ಮೆಲೇ ಆತನ ಮೇಲೆ ಎರಗಿತು. ನೆಲಕ್ಕುರುಳಿದ ಬಾಲಕನನ್ನು ಹೆಬ್ಬಾವು ಸುತ್ತಿಕೊಳ್ಳಲು ಪ್ರಾರಂಭಿಸಿತ್ತು. ದಿಢೀರ್‌ ಆಗಿ ನಡೆದ ಘಟನೆಯಿಂದ ವಿಚಲಿತನಾಗದೆ ಸಮಯಪ್ರಜ್ಞೆ ಮೆರೆದ ಬಾಲಕ ಹಾವಿನ ಜತೆ ಸೆಣಸಾಡಲು ತೊಡಗಿದ. ಹೆಬ್ಬಾವು ಆತನ ಕೈ, ಕಾಲುಗಳಿಗೆ ಬಾಯಿ ಹಾಕಿ ನುಂಗಲು ಪ್ರಯತ್ನಿಸಿದೆ.

    ಅಷ್ಟರಲ್ಲಿ ಆತನಿಗೆ ಪಕ್ಕದಲ್ಲಿ ಕಲ್ಲೊಂದು ಗೋಚರಿಸಿದ್ದು ಅದನ್ನೇ ಕೈಗೆತ್ತಿಕೊಂಡು ಹಾವಿನ ಮುಖಕ್ಕೆ ಜಜ್ಜಿದ್ದಾನೆ. ಇದರಿಂದ ಹಾವಿನ ಮುಖಕ್ಕೆ ತೀವ್ರ ಗಾಯವಾಗಿದ್ದು ಕಣ್ಣು ಸಂಪೂರ್ಣ ಜಖಂಗೊಂಡಿತು. ಬಾಲಕನ ಕಲ್ಲಿನ ಪ್ರಹಾರದಿಂದ ವಿಚಲಿತವಾದ ಹೆಬ್ಟಾವು ಆತನನ್ನು ಬಿಟ್ಟು ಪಕ್ಕಕ್ಕೆ ಸರಿದಿದೆ. ಘಟನೆಯಲ್ಲಿ ಬಾಲಕ ವೈಶಾಖ್ ಗೆ ಅಲ್ಪಸ್ವಲ್ಪ ಗಾಯಗಳಾಗಿದ್ದವು.

    ವೈಶಾಕ್ ಹಾಗೂ ಹೆಬ್ಬಾವಿನೊಂದಿನ ಸೆಣಸಾಟವನ್ನು ಅಜ್ಜನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೈಶಾಕ್ ನ ದೊಡ್ಡಪ್ಪನ ಮಗಳು ಕಣ್ಣಾರೆ ಕಂಡಿದ್ದಾಳೆ ಹಾಗೂ ಹೆಬ್ಬಾವಿನಿಂದ ಆತನನ್ನು ರಕ್ಷಿಸಲು ಆತನ ಬಳಿ ಧಾವಿಸಿದ್ದಾಳೆ. ಆದರೆ ವೈಶಾಕ್ ಅಕ್ಕನನ್ನು ಹೆಬ್ಬಾವಿನ ಬಳಿಗೆ ಬರಲು ಬಿಡದೆ, ಆಕೆಯನ್ನು ಆ ಸ್ಥಳದಿಂದ ತೆರಳುವಂತೆ ಸೂಚಿಸಿ ಆಕೆಯನ್ನು ರಕ್ಷಿಸಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply