Connect with us

    UDUPI

    ಸಚಿವ ಪ್ರಮೋದರಿಂದ ನಿವೇಶನ ರಹಿತ 679 ಮಂದಿಗೆ ಉಚಿತ ನಿವೇಶನ

    ಸಚಿವ ಪ್ರಮೋದರಿಂದ ನಿವೇಶನ ರಹಿತ 679 ಮಂದಿಗೆ ಉಚಿತ ನಿವೇಶನ

    ಉಡುಪಿ, ಮಾರ್ಚ್ 17 : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ರಹಿತ 679 ಮಂದಿಗೆ ಉಚಿತ ನಿವೇಶನ ನೀಡುವ ಕುರಿತ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯ ಪುರಭವನದಲ್ಲಿ ನಡೆಸಿದರು.


    ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸ್ವಂತ ನೆಲೆ ಇಲ್ಲದವರಿಗೆ , ಶಾಶ್ವತ ನೆಲ ಕಲ್ಪಿಸುವ ಉದ್ದೇಶದಿಂದ, ನಿವೇಶನ ರಹಿತರಿಗೆ ನಿವೇಶನ ನೀಡುವ ಕುರಿತಂತೆ 4.5 ವರ್ಷದಿಂದ ಸತತವಾಗಿ ಪ್ರಯತ್ನ ನಡೆಸಿದೆ.

    27 ಸಭೆಗಳನ್ನು ನಡೆಸಲಾಗಿದೆ, ನಗರಸಭಾ ವ್ಯಾಪ್ತಿಯಲ್ಲಿ ಲಭ್ಯವಿರುವ ಜಾಗದ ಕುರಿತಂತೆ ಪರಿಶೀಲಿಸಿ, ಹೆರ್ಗ ಮತ್ತು ಶಿವಳ್ಳಿ ಗ್ರಾಮದಲ್ಲಿ ಜಾಗ ಗುರುತಿಸಿ, ಅರ್ಹ 679 ಮಂದಿಯನ್ನು ಆಯ್ಕೆ ಮಾಡಿದೆ.

    ಅದರಲ್ಲಿ ಪರಿಶಿಷ್ಟ ಜಾತಿ ಯ 43, ಪರಿಶಿಷ್ಟ ಪಂಗಡದ 31, ಮುಸ್ಲಿಂ ಸಮುದಾಯದ 85 , ಕ್ರೈಸ್ತ ಸಮುದಾಯದ 30 , ಇತರೆ ವರ್ಗದ 445 ಮತ್ತು ಸಸ್ಯಾಹಾರಿ ವರ್ಗದ 20 ಮಂದಿಗೆ ಹಾಗೂ 25 ವಿಕಲಚೇತನರಿಗೆ ನಿವೇಶನ ಗುರುತಿಸಲಾಗಿದೆ,

    ವಿಕಲಚೇತನರಿಗೆ ನೆಲ ಅಂತಸ್ತಿನಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಸಚಿವರು ಹೇಳಿದರು.

    ಮನೆ ನಿರ್ಮಾಣಕ್ಕೆ ಸರಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 3.30 ಲಕ್ಷ ಅನುದಾನ ಮತ್ತು ಇತರೆ ವರ್ಗದವರಿಗೆ 2.70 ಲಕ್ಷ ಅನುದಾನ ದೊರೆಯಲಿದೆ.

    ಮನೆ ನಿರ್ಮಾಣಕ್ಕೆ ತಗಲುವ ಹೆಚ್ಚುವರಿ ಮೊತ್ತವನ್ನು ಬ್ಯಾಂಕ್‍ಗಳ ಮೂಲಕ , 20 ವರ್ಷಗಳ ಅವಧಿಯ , ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುವುದು ಎಂದು ಸಚಿವರು ನುಡಿದರು.

    ಮನೆ ನಿರ್ಮಾಣಕ್ಕೆ ಸಂಬಂದಿಸಿದಂತೆ ವಿವಿಧ ಇಲಾಖೆಗಳ ಎಲ್ಲಾ ಅಗತ್ಯ ಅನುಮತಿ , ನೀರು ಮತ್ತು ವಿದ್ಯುತ್ ಸಂಪರ್ಕ ಎಲ್ಲವನ್ನೂ ನಗರಸಭೆಯಿಂದ ಮಾಡಲಾಗುತ್ತಿದೆ.

    430 ಚದುರ ಅಡಿಯ ಸುಸಜ್ಜಿತ ಮನೆ ನಿರ್ಮಾಣ ಮಾಡಲಾಗುವುದು, ಹೆರ್ಗದಲ್ಲಿ ನೆಲ ಅಂತಸ್ತು ಮತ್ತು ಮೊದಲ ಅಂತಸ್ತು, ಸಣ್ಣಕ್ಕಿಬೆಟ್ಟು ಮತ್ತು ಮಂಚಿಯಲ್ಲಿ , ನೆಲ ಅಂತಸ್ತು, ಮೊದಲ ಮತ್ತು ಎರಡನೇ ಅಂತಸ್ತಿನಲ್ಲಿ ಮನೆ ನಿರ್ಮಿಸಲಾಗುವುದು ಹಾಗೂ ಈ ನಿರ್ಮಾಣ ಕಾಮಗಾರಿಯನ್ನು ವಿ4 ಡೆವಲಪರ್ಸ್ ಸಂಸ್ಥೆ ನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.

    ಹೆರ್ಗದಲ್ಲಿ ನಿರ್ಮಾಣಗೊಳ್ಳುವ ಮನೆಗಳಿಗೆ ರಸ್ತೆ ಸಂಪರ್ಕಕ್ಕಾಗಿ 50 ಲಕ್ಷ ರೂ.ಗಳನ್ನು ಕೂಡಲೇ ಬಿಡುಗಡೆಗೊಳಿಸಲಾಗುವುದು ಎಂದ ಸಚಿವರು,

    ಈ ಎಲ್ಲಾ ಪ್ರದೇಶಗಳಿಗೆ ನರ್ಮ್ ಬಸ್ ಸೌಲಭ್ಯ ಹಾಗೂ ಬಸ್ ನಿಲ್ದಾಣ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.

    ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಬಾಕಿ ನಿವೇಶನ ರಹಿತರಿಗೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಅವರಿಗೂ ಸಹ ನಿವೇಶನ ನೀಡಲಾಗುವುದು ಎಂದು ಸಚಿವ ಪ್ರಮೋದ್ ಹೇಳಿದರು.

    ಸಂಬಂಧಪಟ್ಟ ವರ್ಗದ ಫಲಾನುಭವಿಗಳಿಂದಲೇ ಲಾಟರಿ ಎತ್ತಿಸುವ ಮೂಲಕ , ಅವರಿಗೆ ಮಂಜೂರಾಗಿರುವ ನಿವೇಶನದ ವಿವರಗಳನ್ನು ನೀಡಲಾಯಿತು.

    ಇದೇ ಸಂದರ್ಭದಲ್ಲಿ, 94 ಸಿಸಿ ಹಕ್ಕು ಪತ್ರ, ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆ ಮತ್ತು ಮುಖ್ಯಮಂತ್ರಿ ಪರಿಹಾರ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಸಚಿವರು ವಿತರಿಸಿದರು.

    ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಸ್ಥಾಯಿ ಸಮಿತಿ ಅಧ್ಯಕ್ಷ ಹಾರ್ಮಿಸ್ ನೊರೋನ್ಹಾ, ನಗರಸಭೆಯ ವಿವಿಧ ವಾರ್ಡ್ ಗಳ ಸದಸ್ಯರು , ಲೀಡ್ ಬ್ಯಾಂಕ್ ವ್ಯವಸ್ಥಾಪಕ ಫ್ರಾನ್ಸಿಸ್ ಬೋರ್ಗಿಯಾ, ಕಾರ್ಪೊರೇಷನ್ ಬ್ಯಾಂಕ್ ನ ಡಿಜಿಎಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಸುಧಾಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply