Connect with us

    LATEST NEWS

    ಕರಾವಳಿಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಬಾಯಲ್ಲಿ ಡ್ರಗ್ಸ್..!!

    ಮಂಗಳೂರು,ಆಗಸ್ಟ್ 06 : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆ ಗುಣ ಮಟ್ಟದ ಶಿಕ್ಷಣಕ್ಕೆ ಪ್ರಖ್ಯಾತಿ ಪಡೆದಿದೆ. ಸ್ಥಳೀಯರು ಮಾತ್ರವಲ್ಲ ದೇಶ-ವಿದೇಶಗಳಿಂದ ಶಿಕ್ಷಣ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಬರುತ್ತಾರೆ. ಎಜ್ಯುಕೇಷನ್ ಹಬ್ ಎಂದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ  ಕರಾವಳಿಯ ಈ ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಮಾದಕ ವಸ್ತುಗಳ ತಾಣವಾಗಿಯೂ ಕುಖ್ಯಾತಿ ಪಡೆಯುತ್ತಿದೆ.

    ನಿಷೇಧಿತ ಮಾದಕ ವಸ್ತುಗಳಾದ ಗಾಂಜಾ, ಅಫೀಮ್, ಚರಸ್ , ಬ್ರೌನ್ ಶುಗರ್ ಗಳು ಶಿಕ್ಷಣಾ ಕ್ಷೇತ್ರಗಳಿಗೆ ಸದ್ದಿಲ್ಲದೇ ಪ್ರವೇಶಿಸಿ ದಿನೇ ದಿನೇ ತನ್ನ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ. ಭವಿಷ್ಯದ ಭವ್ಯ ಭಾರತದ ಆಧಾರ ಕಂಬಗಳಾಗಬೇಕಾಗಿದ್ದ ಯುವ ವಿದ್ಯಾರ್ಥಿ ಸಮೂಹ ತನ್ನ ಅರಿವಿಗೆ ಬಾರದೇ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ.

    ಇದೀಗ ಮತ್ತೊಂದು ಡ್ರಗ್ಸ್  ಈ ಸ್ಥಳವನ್ನು ಸದ್ದಿಲ್ಲದೆ ಆಕ್ರಮಿಸುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ ಮತ್ತು ಈ ಮಾದಕ ವಸ್ತು ದಿನೇ ದಿನೇ ವಿದ್ಯಾರ್ಥಿಗಳನ್ನು ತನ್ನಡೆ ಸೆಳೆಯುವ ಮೂಲಕ ತನ್ನ ಕದಂಬ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತಿದೆ.

    ಎಲ್ ಎಸ್ ಡಿ – ಅದೇನು ಡ್ರಗ್ಸ್ ಅಂತೀರಾ

    ಅದೇನು ಡ್ರಗ್ ಅಂತೀರಾ ?  ಅದೇ ಎಲ್ ಎಸ್ ಡಿ. ಅರ್ಥತ್ ( Lysergic acid diethylanide). ಇದು ಎಲ್ಲಾ ಡ್ರಗ್ಸ್ ಗಳಂತಲ್ಲ. ಇದರ ಆಕರ್ಷಣೆಯೇ ಬೇರೆಯೇ ರೀತಿಯದ್ದು. ಇದರ ಟಾರ್ಗೆಟ್ ವಿದ್ಯಾರ್ಥಿ ಸಮೂಹ. ಮಕ್ಕಳನ್ನು ಆಕರ್ಷಿಸುವ ಕಾರ್ಟೂನ್ ಕ್ಯಾರೆಕ್ಟರ್ ಗಳೇ ಈಗ ಮಾದಕ ವಸ್ತುಗಳಾಗಿ ಮಾರ್ಪಟ್ಟಿವೆ.  ಸ್ಟಿಕರ್ ರೂಪವನ್ನು ಪಡೆಯುವ ಈ ಮಾಯಾ ಭೂತ 12-15 ವರ್ಷದ ಪುಟ್ಟ ಮಕ್ಕಳಿಂದ ಶಾಲಾ ಕಾಲೇಜುಗಳ ತನಕ ಎಲ್ಲಾ ವರ್ಗದವರನ್ನೂ ಆಕರ್ಷಿಸುತ್ತದೆ. ಈಗಾಗಲೇ ಮಿಠಾಯಿ ,ಮೌತ್ ಸ್ಪ್ರೇ, ಟ್ಯಾಬ್ಲೆಟ್ ಗಳ ರೂಪದಲ್ಲಿ ಮಾದಕ ವಸ್ತುಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಡ್ರಗ್ ಮಾಫಿಯ  ಹೊಸ ಪ್ರಯೋಗವೇ ಸ್ಟಿಕ್ಕರ್ ರೂಪದ ಮಾದಕವಸ್ತು. ಎಲ್ ಎಸ್ ಡಿ ( Lysergic acid diethylanide) ಹೆಸರಿನ ಭ್ರಮಾಕಾರಕ ಮಾದಕವಸ್ತು ಸ್ಟಿಕ್ಕರ್ ರೂಪದಲ್ಲಿ ಮಕ್ಕಳ ಕೈ ಸೇರುತ್ತಿವೆ. ಸ್ಟಿಕರ್ ರೂಪದಲ್ಲಿರುವುದರಿಂದ ಇದನ್ನು ಗುರುತ್ತಿಸುವುದು ಕೂಡ ಕಷ್ಟಸಾಧ್ಯ. ಮಕ್ಕಳನ್ನು ಆಕರ್ಷಿಸುತ್ತಿರುವ ಕಾರ್ಟೂನ್ ಸ್ಟಿಕ್ಕರ್ ಗೆ ಎಲ್ ಎಸ್ ಡಿ ಬ್ಲಾಟರ್ ಪೇಪರ್ ಅಂಟಿಸಲಾಗಿರುತ್ತದೆ. ಈ ಸ್ಟಿಕ್ಕರನ್ನು ನಾಲಿಗೆಯಲ್ಲಿ ಇಟ್ಟರೆ ಅದರಲ್ಲಿರುವ ಮಾದಕವಸ್ತು ಶರೀರ ಸೇರುತ್ತದೆ. ಇದನ್ನು ಸೇವಿಸಿದ ಬಳಿಕ ಗಂಟೆಗಳ ಕಾಲ ಅಮಲು ಇರುತ್ತದೆ. ಮಾದಕ ವಸ್ತು ಹೆಚ್ಚು ಪ್ರಮಾಣದಲ್ಲಿ ದೇಹ ಸೇರಿದರೆ ಸೇವಿಸಿದವರು ಪ್ರಜ್ಞಾಹೀನ ಸ್ಥಿತಿ ತಲುಪುತ್ತಾರೆ.

    ಕರಾವಳಿ ನಗರಿ ಮಂಗಳೂರಿನಲ್ಲಿ ಮೂರು ವರ್ಷಗಳ ಹಿಂದೆಯೇ ಇಂತಹ ಎಲ್ ಎಸ್ ಡಿ ಪತ್ತೆಯಾಗಿತ್ತು. 2015 ಎಪ್ರಿಲ್ ನಲ್ಲಿ ಮಂಗಳೂರಿನ ಕದ್ರಿ ಪೋಲಿಸರು 10 ಲಕ್ಷ ರೂಪಾಯಿ ಮೌಲ್ಯದ ಎಲ್ ಎಸ್ ಡಿ ಯನ್ನು ವಶಪಡಿಸಿ ರಾಬಿನ್ ರಾಯ್ ಎಂಬತನನ್ನು ಬಂಧಿಸಿದ್ದರು.ಈ  ರೀತಿಯ ಮಾದಕ ವಸ್ತೊಂದಿದೆ ಎಂಬುವುದು ಪೋಲಿಸರಿಗೆ ಅರಿವಿಗೆ ಬಂದದ್ದೇ ಆಗ.! ಇದೀಗ ಮಂಗಳೂರು ನಗರಕ್ಕೆ ತಾಗಿಕೊಂಡಿರುವ ಕೇರಳದ ಕಾಸರಗೋಡಿನಲ್ಲಿ ಮತ್ತೊಂದು ಇಂತಹ ಪ್ರಕರಣ ಬೆಳಕಿಗೆ ಬಂದಿದೆ.

    ಇಲ್ಲಿಯ ಶಾಲಾ ವಿದ್ಯಾರ್ಥಿಯೊಬ್ಬ ಮಾದಕ ವಸ್ತುಗಳ ದಾಸನಾಗಿದ್ದು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಎಲ್ ಎಸ್ ಡಿ ಯ ಆಘಾತಕಾರಿ ವಿಚಾರ ಬಯಲಾಗಿದೆ. ಕರ್ನಾಟಕದ ಗಡಿಭಾಗ ಕೇರಳದ ಕಾಸರಗೋಡನ್ನು ತನ್ನ ಅಡ್ಡವನ್ನಾಗಿ ಮಾಡಿ ಅಲ್ಲಿಂದ ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಇದು ರವಾನೆಯಾಗುತ್ತದೆ. ಎಜ್ಯುಕೇಷನ್ ಹಬ್ ಎಂದೇ ಖ್ಯಾತಿ ಪಡೆದಿರುವ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೂ ಸುಲಭವಾಗಿ ಗುರುತ್ತಿಸಲು ಹಾಗೂ ಪತ್ತೆ ಹಚ್ಚಲು ಅಸಾಧ್ಯವಾದ ಈ ಮಾದರಿ ಮಾದಕ ವಸ್ತುಗಳು ಈಗಾಗಲೇ ಲಗ್ಗೆ ಇಟ್ಟಿದೆ. ಕೇರಳ ಪೊಲೀಸರು ಈ ಸ್ಟಿಕ್ಕರ್ ರೂಪದ ಮಾದಕ ವಸ್ತುವಿನ ಈಗಾಗಲೇ ಬೆನ್ನು ಹತ್ತಿದ್ದಾರೆ. ಅದರೆ ಅದೇ  ಕೇರಳ ಗಡಿಗೆ ತಾಗಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪೋಲಿಸರು ಮಾತ್ರ ಎಚ್ಚೆತ್ತಿಲ್ಲ. ಈಗಾಗಲೇ ಮಂಗಳೂರು ಪೋಲಿಸರ ವಿಶೇಷ ತಂಡ ನಗರದ ಶಾಲಾ ಕಾಲೇಜು ಬಳಿಯ ಅಂಗಡಿ- ಗೂಡಾಂಗಡಿಗಳ ಮೇಲೆ ಕಾರ್ಯಾಚರಣೆ  ನಡೆಸಿ ಭಾರಿ ಪ್ರಾಮಾಣದಲ್ಲಿ ಗಾಂಜಾ ವಶಪಡಿಸಿಕೊಂಡಿದೆ. ಇದು ಅತ್ಯಂತ ಕಳವಳಕಾರಿ ಹಾಗೂ ಆತಂಕಕಾರಿ ವಿಷಯವಾಗಿದ್ದು, ಸಂಬಂಧಪಟ್ಟ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು ಇದನ್ನು ತಡೆಯಲು ಇನ್ನಷ್ಟೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗಬಹುದು.

    Share Information
    Advertisement
    Click to comment

    You must be logged in to post a comment Login

    Leave a Reply